ಹೈದರಾಬಾದ್ : ಭಾರತದಲ್ಲಿ ಬಹುಪತ್ನಿತ್ವ ಕಾನೂನು ಬಾಹಿರ, ಕಾನೂನು ಪ್ರಕಾರ ಹಿಂದೂ ಧರ್ಮದ ಕಾನೂನಿನ ಪ್ರಕಾರ ಮತ್ತೊಂದು ಮದುವೆ ಆಗಬೇಕಾದರೆ ಮೊದಲು ಪತ್ನಿ ಅಥವಾ ಪತಿ ಕಾನೂನು ಪ್ರಕಾರ ವಿಚ್ಛೇದನ ನೀಡಿ ಇನ್ನೊಂದು ಮದುವೆ ಆಗಬೇಕು. ಆದರೆ ಇಲ್ಲೊಂದು ಕಾನೂನಿಗೆ ವಿರುದ್ಧವಾಗಿಯೊಂದು ಮದುವೆಯಾಗಿದೆ.
ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ಘಟನೆ ನಡೆದಿದೆ. ಲಿಂಗಾಪುರ ಮಂಡಲದ ಗುಮ್ನೂರ್ ಗ್ರಾಮದ ನಿವಾಸಿ ಸೂರ್ಯದೇವ್, ಲಾಲ್ ದೇವಿ ಮತ್ತು ಝಲ್ಕರಿ ದೇವಿಯನ್ನು ಪ್ರೀತಿಸುತ್ತಿದ್ದು, ಒಂದೇ ಸಮಾರಂಭದಲ್ಲಿ ಅವರನ್ನು ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ಹೇಳಲಾಗಿದೆ.

ಇನ್ನು ಈ ವರ ಒಂದೇ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಎರಡೂ ವಧುಗಳ ಹೆಸರನ್ನು ಮುದ್ರಿಸಿ ಅದ್ಧೂರಿಯಾಗಿ ಮದುವೆಯಾಗಿದ್ದಾನೆ. ಈ ವಿವಾಹ ವಿಡಿಯೋದಲ್ಲಿ ನೀವು ಗಮನಿಸಬಹುದು, ಇಬ್ಬರು ಮಹಿಳೆಯರು ಆತನ ಕೈ ಹಿಡಿದು ಕುಳಿತಿರುವುದನ್ನು ಕಾಣಬಹುದು.
ಮೂವರು ಕುಟುಂಬಗಳು, ಸಂಬಂಧಿಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಸೂರ್ಯದೇವ್ ಲಾಲ್ ದೇವಿ ಮತ್ತು ಝಲ್ಕರಿ ದೇವಿಯನ್ನು ಪ್ರೀತಿಸಿದ ನಂತರ, ಮೂವರು ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದಾರೆ. ಗ್ರಾಮದ ಹಿರಿಯರು ಆರಂಭದಲ್ಲಿ ಈ ಮದುವೆಯನ್ನು ವಿರೋಧಿಸಿದರು. ಆದರೆ ಕೊನೆಗೆ ಅವರ ಆಸೆಗೆ ಒಪ್ಪಿಗೆ ನೀಡಿದ್ದಾರೆ.