ಮಂಗಳೂರು: ಧರ್ಮಸ್ಥಳ ಪ್ರಕರಣದ ಬಗ್ಗೆ ಎಐ ವಿಡಿಯೊ ಮಾಡಿ ಜನರಲ್ಲಿ ಕೋಮು ವೈಷಮ್ಯ ಮೂಡಿಸಲು ಪ್ರಯತ್ನಿಸಿದ ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ಸದ್ಯ ಬಂಧನದ ಭೀತಿ ದೂರವಾಗಿದೆ.
ಮಂಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಆತನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಬಿಗ್ ರಿಲೀಫ್ ಸಿಕ್ಕಂತಾಗಿದೆ. ಆತನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿತ್ತು. ಆತನನ್ನು ಬಂಧಿಸಲು ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದರು.
ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಸಮೀರ್ ಮನೆಯನ್ನು ಪೊಲೀಸರು ಸುತ್ತುವರಿದ ಹಿನ್ನೆಲೆಯಲ್ಲಿ ಆತ ಅಲ್ಲಿಂದ ಪರಾರಿಯಾಗಿದ್ದ. ಇದೀಗ ನಿರೀಕ್ಷಣಾ ಮಂಜೂರಾಗಿದೆ. ಪೊಲೀಸರು ಈ ಹಿಂದೆ ನೋಟಿಸ್ ಕೊಟ್ಟಿದ್ದರೂ ಸಮೀರ್ ವಿಚಾರಣೆಗೆ ಹಾಜರಾಗಿರಲಿಲ್ಲ. ಜನರನ್ನು ಪ್ರಚೋದಿಸುತ್ತಿದ್ದಾನೆ ಎಂದು ಆತನ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿತ್ತು.
ಜುಲೈಯಲ್ಲಿಯೇ ಸಮೀರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಕೇಸುಗಳು ದಾಖಲಾಗಿದ್ದವು. ಧರ್ಮಸ್ಥಳ ಕ್ಷೇತ್ರದ ಕುರಿತು ಅವಹೇಳನಕಾರಿ ವಿಡಿಯೊ ಮಾಡಿರುವುದು, ಜನರಲ್ಲಿ ಕೋಮು ವೈಷಮ್ಯ ಮೂಡಿಸಲು ಪ್ರಯತ್ನಿಸಿರುವುದು ಮುಂತಾದ ಪ್ರಕರಣಗಳಿವೆ.

