18ನೇ ಆವೃತ್ತಿಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ, ಆ ಬಳಿಕ ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದ ಆಸ್ಟ್ರೇಲಿಯಾ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕ ಬಾರಿಸುವ ಮೂಲಕ ಗಮನಸೆಳೆದಿದ್ದಾರೆ. ಇದೇ ವೇಳೆ ರೋಹಿತ್ ಶರ್ಮ ಅವರ ದಾಖಲೆಯೊಂದನ್ನು ಕೂಡ ಸರಿಗಟ್ಟಿದ್ದಾರೆ.
ಮಂಗಳವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ಪರ ಕಣಕ್ಕಿಳಿದ ಮ್ಯಾಕ್ಸ್‌ವೆಲ್ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧ 49 ಎಸೆತಗಳಲ್ಲಿ 13 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 106 ರನ್ ಬಾರಿಸುವ ಮೂಲಕ ಅಜೇಯರಾಗಿ ಉಳಿದರು.
ಒಂದು ಹಂತದಲ್ಲಿ ಮ್ಯಾಕ್ಸ್‌ವೆಲ್ 15 ಎಸೆತಗಳಲ್ಲಿ 11 ರನ್ ಗಳಿಸಿದ್ದರು. ಆದರೆ ಆ ಬಳಿಕ ಸಿಕ್ಸರ್‌ಗಳ ಸುರಿಮಳೆಗೈದು 49 ಎಸೆತಗಳಲ್ಲಿ 106 ರನ್ ಗಳಿಸಿದರು. ಕೊನೆಯ 95 ರನ್‌ಗಳನ್ನು ಕೇವಲ 34 ಎಸೆತಗಳಲ್ಲಿ ಗಳಿಸಿದರು. ಶತಕ ಬಾರಿಸುವ ಮೂಲಕ ರೋಹಿತ್ ಶರ್ಮಾ, ಜೋಸ್ ಬಟ್ಲರ್, ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರರಾದ ಆರನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಸರಿಗಟ್ಟಿದರು. ಇವರೆಲ್ಲರೂ ಟಿ20 ಸ್ವರೂಪದಲ್ಲಿ ಎಂಟು ಶತಕಗಳನ್ನು ಗಳಿಸಿದ್ದಾರೆ. ಮ್ಯಾಕ್ಸ್‌ವೆಲ್ ಕೂಡ 8 ಶತಕ ಗಳಿಸುವ ಮೂಲಕ ಏಳು ಶತಕಗಳನ್ನು ಗಳಿಸಿದ್ದ ಅಭಿಷೇಕ್ ಶರ್ಮಾ, ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್ ಮತ್ತು ಅಲೆಕ್ಸ್ ಹೇಲ್ಸ್ ಅವರ ದಾಖಲೆಯನ್ನು ಹಿಂದಿಕ್ಕಿದರು.
ಮ್ಯಾಕ್ಸ್‌ವೆಲ್ ಶತಕದ ನೆರವಿನಿಂದ ವಾಷಿಂಗ್ಟನ್ ಫ್ರೀಡಂ 5 ವಿಕೆಟ್‌ಗೆ 208ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಲಾಸ್ ಏಂಜಲೀಸ್ ಕೇವಲ 95 ರನ್‌ಗೆ ಸರ್ವಪತನ ಕಂಡಿತು. ವಾಷಿಂಗ್ಟನ್ ಫ್ರೀಡಂ ತಂಡ 113 ರನ್ ಅಂತರದ ಗೆಲುವು ಸಾಧಿಸಿತು. ಇತ್ತೀಚೆಗಷ್ಟೇ ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್ ಮಾದರಿಗೆ ವಿದಾಯ ಹೇಳಿದ್ದರು. ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗಮನದಲ್ಲಿರಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದರು.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳು
ಕ್ರಿಸ್ ಗೇಲ್ (2005-2022) – 22 ಶತಕಗಳು (455 ಇನ್ನಿಂಗ್ಸ್‌ಗಳಲ್ಲಿ)
ಬಾಬರ್ ಅಜಂ (2012-2025) – 11 ಶತಕಗಳು (309 ಇನ್ನಿಂಗ್ಸ್‌ಗಳಲ್ಲಿ)
ರಿಲೀ ರೊಸ್ಸೌ (2008-2025) – 9 ಶತಕಗಳು (363 ಇನ್ನಿಂಗ್ಸ್‌ಗಳಲ್ಲಿ)
ವಿರಾಟ್ ಕೊಹ್ಲಿ (2007-2025) – 9 ಶತಕಗಳು (397 ಇನ್ನಿಂಗ್ಸ್‌ಗಳಲ್ಲಿ)
ಮೈಕೆಲ್ ಕ್ಲಿಂಗರ್ (2006-2019) – 8 ಶತಕಗಳು (198 ಇನ್ನಿಂಗ್ಸ್‌ಗಳಲ್ಲಿ)
ಆರನ್ ಫಿಂಚ್ (2009-2024) – 8 ಶತಕಗಳು (380 ಇನ್ನಿಂಗ್ಸ್‌ಗಳಲ್ಲಿ)
ಡೇವಿಡ್ ವಾರ್ನರ್ (2007-2025) – 8 ಶತಕಗಳು (406 ಇನ್ನಿಂಗ್ಸ್‌ಗಳಲ್ಲಿ)
ಜೋಸ್ ಬಟ್ಲರ್ (2009-2024) – 8 ಶತಕಗಳು (420 ರಲ್ಲಿ) ಇನ್ನಿಂಗ್ಸ್)
ರೋಹಿತ್ ಶರ್ಮಾ (2007-2024) – 8 ಶತಕಗಳು (450 ಇನ್ನಿಂಗ್ಸ್‌ನಲ್ಲಿ)
ಗ್ಲೆನ್ ಮ್ಯಾಕ್ಸ್‌ವೆಲ್ (2010-2025) – 8 ಶತಕಗಳು (440 ಇನ್ನಿಂಗ್ಸ್‌ಗಳಲ್ಲಿ)

