ಬೆಂಗಳೂರು: ಯುಗಾದಿ ಹಬ್ಬದ ಸಂಭ್ರಮದ ಬಳಿಕದ ದಿನವಾದ ಇಂದು ‘ಹೊಸತೊಡಕು’ ಆಚರಣೆಯ ಹಿನ್ನೆಲೆ ರಾಜ್ಯಾದ್ಯಂತ ಮಾಂಸದ ಖರೀದಿ ಭಾರೀ ಪ್ರಮಾಣದಲ್ಲಿ ಜೋರಾಗಿದೆ.
ಬೆಂಗಳೂರು, ದೇವನಹಳ್ಳಿ, ಮೈಸೂರು ಹಾಗೂ ಮಂಡ್ಯ ಸೇರಿದಂತೆ ಹಲವು ನಗರಗಳಲ್ಲಿ ಮಾಂಸದ ಅಂಗಡಿಗಳು ಗ್ರಾಹಕರಿಂದ ಕಿಕ್ಕಿರಿದು ಕಾಣಿಸುತ್ತಿವೆ. ಬೆಳಗ್ಗಿನಿಂದಲೇ ಜನರು ಸಾಲಿನಲ್ಲಿ ನಿಂತು ಮಟನ್ ಖರೀದಿಸುತ್ತಿರುವ ದೃಶ್ಯಗಳು ಎಲ್ಲೆಡೆ ಕಂಡುಬಂದಿವೆ.
ಹೊಸತೊಡಕಿನ ಹಿನ್ನೆಲೆಯಲ್ಲಿ ಮಟನ್ ದರದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಪ್ರತಿ ಕೆಜಿಗೆ ₹1000ರಿಂದ ₹1500ರವರೆಗೆ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಾಗಿದ್ದರೂ ಸಹ ಸಂಪ್ರದಾಯವನ್ನು ಪಾಲಿಸಲು ಜನರು ಉತ್ಸಾಹದಿಂದ ಖರೀದಿಯಲ್ಲಿ ತೊಡಗಿರುವುದು ವಿಶೇಷ.
ಪ್ರತಿ ವರ್ಷದಂತೆ ಈ ವರ್ಷವೂ ಹೊಸತೊಡಕಿನಂದು ಮಾಂಸದ ಬೇಡಿಕೆ ಹೆಚ್ಚಿದ್ದು, ಹಬ್ಬದ ಸಂಭ್ರಮದಲ್ಲಿ ಜನರು ಖರೀದಿಯನ್ನು ಮುಂದುವರಿಸಿದ್ದಾರೆ.

