ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿರುವ ಘಟನೆ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಬೇಲೂರಿನ ಪುರಸಭೆ ಆವರಣದಲ್ಲಿರುವ ಶ್ರೀವರಸಿದ್ಧಿ ವಿನಾಯಕನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಬೇಲೂರು ದೇವಾಲಯಕ್ಕೆ ಭೇಟಿ ನೀಡಿದ್ದ ಮಹಿಳೆಯೊಬ್ಬರು ಅಲ್ಲಿನ ಗಣಪತಿ ವಿಗ್ರಹಕ್ಕೆ ಪಾದರಕ್ಷೆಗಳನ್ನು ಹಾಕಿ ಅಪಮಾನ ಮಾಡಿದ್ದರು. ಈ ಕೃತ್ಯವನ್ನು ಗಮನಿಸಿದ ದೇವಾಲಯದ ಭಕ್ತರು ಮತ್ತು ಸಿಬ್ಬಂದಿ ತಕ್ಷಣ ಪೊಲೀಸರಿಗೆ ದೂರು ನೀಡಿದ್ದರು. ಘಟನೆಯ ದೃಶ್ಯಗಳು ದೇವಾಲಯದ ಆವರಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾದ ಮಹಿಳೆಯ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು, ಆಕೆ ಚಿಕ್ಕಮಗಳೂರಿನ ಉಂಡೆದಾಸರಹಳ್ಳಿಯ ನಿವಾಸಿ ಎಂಬುದನ್ನು ಪತ್ತೆಹಚ್ಚಿದ್ದಾರೆ. ತದನಂತರ, ಚಿಕ್ಕಮಗಳೂರು ಡಿವೈಎಸ್‌ಪಿ ಅವರ ನೇತೃತ್ವದಲ್ಲಿ ನಗರ ಪೊಲೀಸರು ಮತ್ತು ಬಸವನಹಳ್ಳಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ವಶಕ್ಕೆ ಪಡೆದರು.
ಪ್ರಾಥಮಿಕ ವಿಚಾರಣೆಯ ವೇಳೆ ಮಹಿಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಆಕೆಯ ಹೇಳಿಕೆಗಳನ್ನು ಮತ್ತು ಆಕೆಯ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ. ಈ ಘಟನೆ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಧಾರ್ಮಿಕ ಕೇಂದ್ರವೊಂದರಲ್ಲಿ ಇಂತಹ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಮಹಿಳೆ ಮಾನಸಿಕ ಅಸ್ವಸ್ಥರು ಎಂಬ ಮಾಹಿತಿ ಹೊರಬಿದ್ದ ನಂತರ ಪರಿಸ್ಥಿತಿ ತಣ್ಣಗಾಗಿದೆ. ಪೊಲೀಸರು ಪ್ರಕರಣದ ಕುರಿತು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿದ್ದಾರೆ.

