ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಸಿಲಿಂಡರ್‌ಗಳ ಲಭ್ಯತೆ ಕಡಿಮೆಯಾಗಿರುವುದರಿಂದ ಪುರಿ, ದೋಸೆ ಸೇರಿದಂತೆ ಹೆಚ್ಚು ಗ್ಯಾಸ್ ಬಳಕೆಯ ಆಹಾರ ಪದಾರ್ಥಗಳ ತಯಾರಿಕೆಯನ್ನು ಅನೇಕ ಹೋಟೆಲ್‌ಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಕೆಲವು ಸಣ್ಣ ಹೋಟೆಲ್‌ಗಳು ಮುಚ್ಚಲ್ಪಟ್ಟಿದ್ದು, ದೊಡ್ಡ ಹೋಟೆಲ್‌ಗಳು ಕೂಡ ಸೀಮಿತವಾಗಿ ವ್ಯವಹಾರ ನಡೆಸುತ್ತಿರುವ ಸ್ಥಿತಿ ಎದುರಾಗಿದೆ.
ವಾಣಿಜ್ಯ ಸಿಲಿಂಡರ್ ಬೆಲೆ ಮೂರೇ ದಿನಗಳಲ್ಲಿ ₹1,600ರಿಂದ ₹2,200ಕ್ಕೆ ಏರಿಕೆಯಾಗಿದೆ. ಬೆಲೆ ಏರಿಕೆ ಮತ್ತು ಪೂರೈಕೆ ಕೊರತೆಯಿಂದ ಸಾವಿರಾರು ಹೋಟೆಲ್ ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪೂರೈಕೆ ಸಮರ್ಪಕವಾಗದಿದ್ದರೆ ಹೋಟೆಲ್ ಉದ್ಯಮವೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕರು ಎಚ್ಚರಿಸಿದ್ದಾರೆ. ಕೆಲವರು ಸರ್ಕಾರದ ವಿಳಂಬ ನೀತಿಯನ್ನು ಟೀಕಿಸುತ್ತಿದ್ದು, ಬೆಂಗಳೂರಿನ ಅನೇಕ ಹೋಟೆಲ್‌ಗಳು ಮುಚ್ಚುವ ಆತಂಕ ವ್ಯಕ್ತವಾಗಿದೆ.
ಚಾಮುಂಡಿ ಬೆಟ್ಟದಲ್ಲಿ ದಾಸೋಹಕ್ಕೆ ತೊಂದರೆ ಇಲ್ಲ
ಇದೇ ವೇಳೆ ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ರಾಜ್ಯದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಕೊರತೆ ಉಂಟಾದರೂ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ನೀಡುವ ದಾಸೋಹ ಪ್ರಸಾದಕ್ಕೆ ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಟ್ಟಕ್ಕೆ ಅಗತ್ಯವಿರುವ ಅನಿಲ ಪೂರೈಕೆ ಮುಂದುವರಿದಿದ್ದು, ಮುಂದಿನ ಎರಡು ವಾರಗಳಿಗೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಅನಿಲ ಕೊರತೆ ಎದುರಾದರೆ ಪರ್ಯಾಯವಾಗಿ ಸೌದೆ ಒಲೆ ಬಳಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. ಭಕ್ತರಿಗೆ ನೀಡುವ ಪ್ರಸಾದ ವ್ಯವಸ್ಥೆ ಎಂದಿನಂತೆ ಮುಂದುವರಿಯಲಿದೆ ಎಂದು ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ತಿಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉಪಹಾರದಲ್ಲಿ ಬದಲಾವಣೆ
ದೇಶದಾದ್ಯಂತ ಉಂಟಾಗಿರುವ ಎಲ್‌ಪಿಜಿ ಗ್ಯಾಸ್ ಪೂರೈಕೆ ವ್ಯತ್ಯಯದ ಪರಿಣಾಮ ರಾಜ್ಯದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ತಟ್ಟಿದೆ. ಗ್ಯಾಸ್ ಕೊರತೆಯ ಹಿನ್ನೆಲೆಯಲ್ಲಿ ಬುಧವಾರದಿಂದ (ಮಾ.11) ದೇವಸ್ಥಾನದಲ್ಲಿ ಬೆಳಗಿನ ಉಪಹಾರದಲ್ಲಿ ಬದಲಾವಣೆ ಮಾಡಲಾಗಿದೆ.
ಸಾಮಾನ್ಯವಾಗಿ ಪ್ರತಿದಿನ ಭಕ್ತರಿಗೆ ವಿವಿಧ ಬಗೆಯ ಬಿಸಿ ಉಪಹಾರಗಳನ್ನು ನೀಡಲಾಗುತ್ತಿತ್ತು. ಆದರೆ ಗ್ಯಾಸ್ ಪೂರೈಕೆ ವ್ಯತ್ಯಯದ ಕಾರಣ ಬೇಯಿಸುವ ತಿನಿಸುಗಳ ಬದಲಿಗೆ ಅವಲಕ್ಕಿ ಮತ್ತು ಮೊಸರು ವಿತರಣೆ ಮಾಡಲಾಗುತ್ತಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ಈಗ ದೇವಸ್ಥಾನದಲ್ಲಿ ಕೇವಲ ಮೂರು ದಿನಗಳಿಗೆ ಸಾಕಾಗುವಷ್ಟು ಗ್ಯಾಸ್ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿಯೂ ಗ್ಯಾಸ್ ಪೂರೈಕೆ ಆಗದಿದ್ದರೆ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದಿನಕ್ಕೆ 20 ಸಿಲಿಂಡರ್ ಗ್ಯಾಸ್ ಪೂರೈಕೆ ಮಾಡುವಂತೆ ದೇವಸ್ಥಾನದಿಂದ ಪೂರೈಕೆ ಸಂಸ್ಥೆಗೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ ಗ್ಯಾಸ್ ಕೊರತೆ ಮುಂದುವರಿದರೆ ಮಧ್ಯಾಹ್ನದ ಅನ್ನಸಂತರ್ಪಣೆಯಲ್ಲೂ ಕೆಲವು ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ಕುರಿತು ದೇವಸ್ಥಾನದಿಂದ ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ತಿಳಿದುಬಂದಿದೆ.

