ನವದೆಹಲಿ, ಮಾ.9: ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಯುದ್ಧದ ಭೀತಿಯ ಪರಿಣಾಮ ಜಾಗತಿಕ ಮಾರುಕಟ್ಟೆಗಳ ಮೇಲೆ ಕರಾಳ ಛಾಯೆ ಬೀರುತ್ತಿದ್ದು, ಸೋಮವಾರ ಭಾರತೀಯ ಷೇರು ಮಾರುಕಟ್ಟೆ ಭಾರಿ ಕುಸಿತಕ್ಕೆ ಸಾಕ್ಷಿಯಾಗಿದೆ. ಹೂಡಿಕೆದಾರರ ಆತಂಕದಿಂದಾಗಿ ಸೆನ್ಸೆಕ್ಸ್ 2,000ಕ್ಕೂ ಹೆಚ್ಚು ಅಂಕಗಳ ಪತನ ಕಂಡಿದ್ದು, ನಿಫ್ಟಿ ಪ್ರಮುಖ ಮೈಲಿಗಲ್ಲಾದ 24,000 ಅಂಕಗಳಿಗಿಂತ ಕೆಳಕ್ಕೆ ಜಾರಿದೆ.
ಮಧ್ಯಪ್ರಾಚ್ಯದ ಸಂಘರ್ಷದ ಪರಿಣಾಮವಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 105 ಡಾಲರ್ ದಾಟಿ ನಾಲ್ಕು ವರ್ಷಗಳ ಗರಿಷ್ಠ ಮಟ್ಟ ತಲುಪಿದೆ. ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾಗಿರುವ ಭಾರತದ ಮೇಲೆ ಇದು ಹಣದುಬ್ಬರದ ಒತ್ತಡವನ್ನು ಹೆಚ್ಚಿಸಬಹುದು ಎಂಬ ಆತಂಕ ಹೂಡಿಕೆದಾರರಲ್ಲಿ ಮನೆ ಮಾಡಿದೆ.
ಬ್ಯಾಂಕಿಂಗ್ ವಲಯಕ್ಕೆ ಹೊಡೆತ:
ಮಾರುಕಟ್ಟೆ ಕುಸಿತದಲ್ಲಿ ಬ್ಯಾಂಕಿಂಗ್ ವಲಯವೇ ಹೆಚ್ಚು ಹೊಡೆತ ತಿಂದಿದೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು ಶೇ.4ಕ್ಕೂ ಹೆಚ್ಚು ಕುಸಿತ ಕಂಡು ಆರಂಭದಲ್ಲೇ ಮಾರುಕಟ್ಟೆಯನ್ನು ಕಂಗೆಡಿಸಿತು. ಖಾಸಗಿ ಬ್ಯಾಂಕ್ ಹಾಗೂ ಹಣಕಾಸು ಸೇವಾ ವಲಯದ ಷೇರುಗಳೂ ಭಾರೀ ಮಾರಾಟದ ಒತ್ತಡಕ್ಕೆ ಒಳಗಾದವು.
ಮಿಡ್‌ಕ್ಯಾಪ್, ಸ್ಮಾಲ್‌ಕ್ಯಾಪ್ ಷೇರುಗಳಿಗೂ ಪೆಟ್ಟು:
ನಿಫ್ಟಿ ಮಿಡ್‌ಕ್ಯಾಪ್ ಹಾಗೂ ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ ಶೇ.2.67 ರಷ್ಟು ಕುಸಿದು ಸಣ್ಣ ಹೂಡಿಕೆದಾರರಿಗೆ ಆಘಾತ ನೀಡಿವೆ.
ಏಷ್ಯಾದ ಮಾರುಕಟ್ಟೆಗಳೂ ಪತನ:
ಭಾರತ ಮಾತ್ರವಲ್ಲದೆ ಏಷ್ಯಾದ ಇತರ ಪ್ರಮುಖ ಮಾರುಕಟ್ಟೆಗಳೂ ತೀವ್ರ ಕುಸಿತ ಕಂಡಿವೆ. ಜಪಾನ್‌ನ ನಿಕ್ಕಿ ಸೂಚ್ಯಂಕ ಶೇ.6.05 ರಷ್ಟು ಹಾಗೂ ದಕ್ಷಿಣ ಕೊರಿಯಾದ ಕೋಸ್ಪಿ ಶೇ.6.5 ರಷ್ಟು ಕುಸಿದಿದ್ದು, ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯನ್ನು ಹೆಚ್ಚಿಸಿದೆ. ಗಿಫ್ಟ್ ನಿಫ್ಟಿ ಕೂಡ ಶೇ.2.3 ರಷ್ಟು ಕುಸಿದು ದಿನದ ವಹಿವಾಟಿಗೆ ಕರಾಳ ಮುನ್ಸೂಚನೆ ನೀಡಿತ್ತು.

