ಚಿಕ್ಕಬಳ್ಳಾಪುರದಲ್ಲಿ ರಸ್ತೆ ನಿರ್ಮಾಣ ವಿರೋಧಿಸಿದ ವ್ಯಕ್ತಿ
ಗಣಿ ಮಾಲೀಕನಿಂದ ರೈತನ ಮೇಲೆ ಗುಂಡಿನ ದಾಳಿ
ಗಣಿಗಾರಿಕೆ ಲಾರಿಗಳ ಓಡಾಟಕ್ಕೆ ದಾರಿ ವಿಚಾರವಾಗಿ ಗಲಾಟೆ
ಪ್ರತಿಭಟನಾ ನಿರತ ರೈತರಿಗೆ ಗುಂಡಿಕ್ಕಿದ ಗಣಿ ಮಾಲಕ
ಕಲ್ಲು ಕ್ವಾರಿ ಕ್ರಷರ್ಗೆ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಲ್ಲು ಗಣಿಗಾರಿಕೆ ಮಾಲಕನೋರ್ವ ಗುಂಡಿಕ್ಕಿದ ಅಘಾತಕಾರಿ ಘಟನೆ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಕನಗಾನಕೊಪ್ಪ ಗ್ರಾಮದಲ್ಲಿ ನಡೆದಿದೆ.ಇತ್ತೀಚೆಗೆ ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣ ನಡೆದ ಬೆನ್ನಲ್ಲೇ ಮತ್ತೊಂದು ಶೂಟೌಟ್ ಪ್ರಕರಣ ರಾಜ್ಯದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಕನಗಾನಕೊಪ್ಪದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನ ಕಾಲಿಗೆ ಗುಂಡು ಹಾರಿಸಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ರಸ್ತೆ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದ್ದರಿಂದ ರೈತ ಚಿಕನ್ ರವಿ ಎಂಬುವವರ ಮೇಲೆ ಸಕಲೇಶಕುಮಾರ್ ಎಂಬಾತ ಫೈರಿಂಗ್ ಮಾಡಿದ್ದಾನೆ.
ಗುಂಡಿನ ದಾಳಿ ನಡೆಸಿರುವ ಸಕಲೇಶಕುಮಾರ್, ಬಿಜೆಪಿ ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಅವರ ಸಂಬಂಧಿ ಎನ್ನಲಾಗಿದೆ. ರಸ್ತೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ಚಿಕನ್ ರವಿ ಕಾಲಿಗೆ ಸಕಲೇಶಕುಮಾರ್ ಗುಂಡು ಹಾರಿಸಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲೂಕು ಕನಗಾನಕೊಪ್ಪದ ಬಳಿ ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಕುಟುಂಬಸ್ಥರಿಂದ ಗಣಿಗಾರಿಕೆ ನಡೆಯುತ್ತಿದ್ದು, ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಸಕಲೇಶಕುಮಾರ್ ಗುಂಡು ಹಾರಿಸಿದ್ದಾನೆ. ಗಾಯಾಳು ರವಿಯನ್ನು ಮಂಚೇನಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ತಲೆಗೆ ಕಲ್ಲಿನಿಂದ ಹೊಡೆದರು ಎಂಬ ಕಾರಣಕ್ಕೆ ಸಕಲೇಶಕುಮಾರ್ ಫೈರಿಂಗ್ ಮಾಡಿದ್ದಾನೆ ಎನ್ನಲಾಗಿದೆ. ತಲೆಗೆ ಯಾರೋ ಕಲ್ಲು ಹೊಡೆಯುತ್ತೀರಾ ಎಂದು ಗನ್ ಹಿಡಿದು ಸಕಲೇಶಕುಮಾರ್ ಬೆದರಿಸಿದ್ದು, ಸ್ಥಳದಲ್ಲಿದ್ದ ಜನ ಭಯಭೀತರಾಗಿದ್ದಾರೆ. ಇನ್ನು ಗಾಯಾಳು ಚಿಕನ್ ರವಿ ಕಾಲಿಗೆ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ