ಅಪರೂಪದ ಖಾಯಿಲೆ ಇರುವ 2 ವರ್ಷದ ಮಗು
ಕಂದಮ್ಮ ಕೀರ್ತನಾ ಚಿಕಿತ್ಸೆಗಾಗಿ ಜಮೀರ್ ಅಹಮದ್
ಮೈಸೂರಿನ ಕೀರ್ತನಾ ಕುಟುಂಬಕ್ಕೆ ನೆರವಾದ ಸಹೃದಯಿ ಸಚಿವರು
ಮಗುವಿನ ಚಿಕಿತ್ಸೆಗಾಗಿ 25 ಲಕ್ಷ ರೂ ಚೆಕ್ ನೀಡಿದ ಸಚಿವ ಜಮೀರ್ ಅಹಮದ್
ಮೈಸೂರು ನಗರದ ಶ್ರೀ ಕಿಶೋರ್ ಮತ್ತು ಶ್ರೀಮತಿ ನಾಗಶ್ರೀ ದಂಪತಿಗಳ ಪುತ್ರಿ 2 ವರ್ಷದ ಕೀರ್ತನಾ ಅವರ ಚಿಕಿತ್ಸೆಗೆ ಸಹಾಯಧನವಾಗಿ ಸಹೃದಯಿ ಸಚಿವರೆಂದೇ ಕರೆಯಲ್ಪಡುವ ಜಮೀರ್ ಅಹಮದ್ ಖಾನ್ ಅವರು ವೈಯಕ್ತಿಕವಾಗಿ 25 ಲಕ್ಷ ರೂ.ಗಳ ಚೆಕ್ ನೀಡಿ ಮಗುವಿನ ತಂದೆ ತಾಯಿಗೆ ಸಾಂತ್ವನ ಹೇಳಿದರು.
ಪುಟ್ಟ ಕಂದಮ್ಮ ಕೀರ್ತನಾ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಇತ್ತೀಚೆಗೆ ನಟ ಸುದೀಪ್ ಮನವಿ ಮಾಡಿ ಆಕೆಯ ಚಿಕಿತ್ಸೆಗೆ ಸಹಾಯ ಮಾಡುವಂತೆ ಕೋರಿದ್ದರು. 2 ತಿಂಗಳ ಹಿಂದೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಕೂಡ ಕೀರ್ತನಾಳ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಪುಟ್ಟ ಕಂದಮ್ಮ ಕೀರ್ತನಾಳ ಚಿಕಿತ್ಸಗೆ ಬರೋಬ್ಬರಿ 16 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತಿದೆ.
ಒಂದು ತಿಂಗಳ ಸಿರಫ್ಗೆ ಅಂದಾಜು 12 ಲಕ್ಷ ರೂ. ಬೇಕಾಗುತ್ತಿದೆ.ಒಂದು ವರ್ಷ ತುಂಬುವವರೆಗೂ ಎಲ್ಲಾ ಮಕ್ಕಳಂತೆ ಇದ್ದಳು ಕೀರ್ತನಾ. ಆದರೆ ಆ ಬಳಿಕ ಎಲ್ಲಾ ಮಕ್ಕಳಂತೆ ತೆವಳಲು, ನಡೆಯಲು ಸಾಧ್ಯವಾಗದೇ ಇದ್ದಾಗ ಮಗಳನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
4 ತಿಂಗಳ ಕಾಲ ಸಾಕಷ್ಟು ತಪಾಸಣೆ ನಡೆಸಿ ಕೀರ್ತನಾಗೆ ಇದ್ದ ಕಾಯಿಲೆಯನ್ನು ವೈದ್ಯರು ಗುರ್ತಿಸಿದ್ದರು. SMA ಟೈಪ್ 2 ಅಷ್ಟು ಸುಲಭವಾಗಿ ಗುರ್ತಿಸಲು ಸಾಧ್ಯವಾಗುವುದಿಲ್ಲ. ನಿಲ್ಲಲು, ಕೂರಲು ಕೀರ್ತನಾ ಕಷ್ಟಪಡುತ್ತಿದ್ದಾಳೆ.