ಚಿಕ್ಕಮಗಳೂರು, ಏ.10: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ 14 ವರ್ಷದ ಬಾಲಕಿ ಶ್ರೀನಂದಾ ಅವರ ಮೃತದೇಹ ಇಂದು ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಸಮೀಪ ಪತ್ತೆಯಾಗಿದೆ. ಸುಮಾರು 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಬಾಲಕಿಯ ಶವ ಪತ್ತೆಯಾದ್ದರಿಂದ ಘಟನೆ ದುರಂತ ಅಂತ್ಯ ಕಂಡಿದೆ.
ಏಪ್ರಿಲ್ 7ರಂದು ಕೇರಳದಿಂದ ಚಿಕ್ಕಮಗಳೂರಿಗೆ ಆಗಮಿಸಿದ್ದ ಸುಮಾರು 40 ಜನರ ಪ್ರವಾಸಿ ತಂಡದೊಂದಿಗೆ ಶ್ರೀನಂದಾ ಬಂದಿದ್ದರು. ಇನಾಮು ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಾ ಜಲಪಾತಕ್ಕೆ ಭೇಟಿ ನೀಡಿದ ವೇಳೆ ಆಕೆ ಹಠಾತ್ತನೆ ನಾಪತ್ತೆಯಾಗಿದ್ದಳು. ಈ ಹಿನ್ನೆಲೆ ತಕ್ಷಣವೇ ಪೊಲೀಸರು ಹಾಗೂ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸಿತ್ತು.
ಬಾಲಕಿಯ ಪತ್ತೆಗಾಗಿ ಎಸ್‌ಡಿಆರ್‌ಎಫ್ (SDRF), ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಎಎನ್ಎಫ್ (ANF) ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದವು. ದಟ್ಟ ಅರಣ್ಯ ಪ್ರದೇಶ ಹಾಗೂ ಕಡಿದಾದ ಪರ್ವತ ಪ್ರದೇಶದ ಸವಾಲಿನ ನಡುವೆಯೂ ಡ್ರೋನ್ ಮತ್ತು ಥರ್ಮಲ್ ಕ್ಯಾಮೆರಾಗಳ ಸಹಾಯದಿಂದ ತೀವ್ರ ಶೋಧ ನಡೆಸಲಾಗಿತ್ತು.
ಸತತ ಮೂರು ದಿನಗಳ ನಿರಂತರ ಶೋಧದ ನಂತರ ಇಂದು ಮಾಣಿಕ್ಯಧಾರಾದ ಆಳವಾದ ಪ್ರಪಾತದ ಕೆಳಭಾಗದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಕಾಲು ಜಾರಿ ಬಿದ್ದು ಈ ದುರಂತ ಸಂಭವಿಸಿರುವ ಸಾಧ್ಯತೆ ವ್ಯಕ್ತವಾಗಿದ್ದರೂ, ನಿಖರ ಕಾರಣ ತಿಳಿದುಬರುವುದಕ್ಕಾಗಿ ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಕೇರಳದಿಂದ ಆಗಮಿಸಿದ್ದ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮನಕಲುಕುವಂತಿತ್ತು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

