ರಾಯಚೂರು: ನಾಪತ್ತೆಯಾಗಿದ್ದ ಆರೋಗ್ಯ ಇಲಾಖೆ ಲ್ಯಾಬ್ ಟೆಕ್ನಿಷಿಯನ್ ಶವವಾಗಿ ಪತ್ತೆ, ದೂರು ನೀಡಿದ ಪತ್ನಿ ರಾಯಚೂರು, ಮೇ 05: 2 ದಿನದ ಹಿಂದೆ ನಾಪತ್ತೆಯಾಗಿದ್ದ ಆರೋಗ್ಯ ಇಲಾಖೆ ಲ್ಯಾಬ್ ಟೆಕ್ನಿಷಿಯನ್ ಇದೀಗ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಸ್ಕಿ ಪಟ್ಟಣದ ಬಳಿ ಠಾಕೂರ್ ಲೇಔಟ್ನಲ್ಲಿ ನಡೆದಿದೆ.
ಮಂಜುನಾಥ್ (33) ಮೃತ ಲ್ಯಾಬ್ ಟೆಕ್ನಿಷಿಯನ್. ಸದ್ಯ ಸ್ಥಳಕ್ಕೆ ಮಸ್ಕಿ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ಮಂಜುನಾಥ್ ಪತ್ನಿ ಲಕ್ಷ್ಮೀ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಮೃತ ಮಂಜುನಾಥ್ ಮೆದಿಕಿನಾಳದಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿ ಲಕ್ಷ್ಮೀ ಮತ್ತು ಇಬ್ಬರು ಮಕ್ಕಳೊಂದಿಗೆ ಮಸ್ಕಿ ಪಟ್ಟಣದಲ್ಲಿ ವಾಸವಾಗಿದ್ದರು.
ಕಳೆದ ಎರಡು ದಿನಗಳಿಂದ ಮಂಜುನಾಥ್ ನಾಪತ್ತೆಯಾಗಿದ್ದರು. ಚರಂಡಿಯೊಂದರ ಬಳಿ 2 ದಿನ ನಿಂತಲ್ಲೇ ನಿಲ್ಲಿಸಲಾಗಿದ್ದ ಬೈಕ್ ಪರಿಶೀಲನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮಂಜುನಾಥ್ ಪತ್ನಿ ಲಕ್ಷ್ಮೀ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

