ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ S. Suresh Kumar ಅವರು ಬೆಳಿಗ್ಗೆ 7 ಗಂಟೆಗೆ ತೆರೆದಿದ್ದ ಬಾರ್‌ನ್ನು ಮುಚ್ಚಿಸಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿದಿನ ಬೆಳಿಗ್ಗೆ ನಡೆಯುವ “ವಾರ್ಡ್ ನಡಿಗೆ” ಕಾರ್ಯಕ್ರಮದ ವೇಳೆ ಪ್ರಕಾಶ್‌ನಗರದಲ್ಲಿ ಬಾರ್ ತೆರೆಯಲ್ಪಟ್ಟಿರುವುದನ್ನು ಗಮನಿಸಿದ ಶಾಸಕ, ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಇಷ್ಟು ಬೆಳಿಗ್ಗೆ ಅಂಗಡಿ ತೆರೆದಿದ್ದೇಕೆ ಎಂದು ಪ್ರಶ್ನಿಸಿದ ಅವರು, ಬಾರ್ ಪರವಾನಗಿ ದಾಖಲೆಗಳನ್ನು ಪರಿಶೀಲಿಸಿ, ನಿಗದಿತ ಸಮಯದ ಬಗ್ಗೆ ಸ್ಪಷ್ಟನೆ ಕೇಳಿದರು.
“ಇದೇನು ದಿನಸಿ ಅಂಗಡಿಯೇ? ಹೂವಿನ ವ್ಯಾಪಾರವೇ? ಹಣ್ಣಿನ ವ್ಯಾಪಾರವೇ? ಹಾಲು, ಹಣ್ಣು, ಹೂವು ಮಾರಾಟ ಮಾಡುವ ಸಮಯದಲ್ಲಿ ಮದ್ಯ ಮಾರಾಟ ಸರಿಯೇ?” ಎಂದು ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.
ನಿಗದಿತ ಸಮಯಕ್ಕೆ ಮೀರಿಸಿ ಅಂಗಡಿ ತೆರೆಯುವುದು ಕಾನೂನುಬಾಹಿರ ಎಂದು ಸೂಚಿಸಿದ ಶಾಸಕ, ತಕ್ಷಣವೇ ಬಾರ್ ಮುಚ್ಚುವಂತೆ ಆದೇಶಿಸಿದರು.
ರಾಜಾಜಿನಗರ ಕ್ಷೇತ್ರದ ವ್ಯಾಪ್ತಿಯ ಪ್ರಕಾಶ್‌ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ “ಪ್ರವೀಣ್ ಬಾರ್” ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯರು ಶಾಸಕರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

