ನವದೆಹಲಿ : ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಕನಿಷ್ಠ ನಾಲ್ಕು ಪ್ರಯತ್ನಗಳನ್ನು ಮಾಡಿದ್ದು, ಇದನ್ನು ಮೋದಿ ನಿರಾಕರಿಸಿದ್ದಾರೆ ಎಂದು ಜರ್ಮನ್ ಮೂಲದ ಫ್ರಾಂಕ್‌ಫರ್ಟರ್ ಆಲ್ಗೆಮೈನ್ ಪತ್ರಿಕೆ ವರದಿ ಮಾಡಿದೆ.
ಪ್ರಕಟಗೊಂಡ ಪತ್ರಿಕೆಯ ಪ್ರತಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಬರ್ಲಿನ್ ಮೂಲದ ಗ್ಲೋಬಲ್ ಪಬ್ಲಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಥಾರ್ಸ್ಟನ್ ಬೆನ್ನರ್ ವಿಷಯ ಬಹಿರಂಗಪಡಿಸಿದ್ದಾರೆ.
ಪ್ರಧಾನಿ ಮೋದಿ ಮನವೊಲಿಸಲು ಟ್ರಂಪ್ ಪದೇ ಪದೇ ಪ್ರಯತ್ನಿಸುತ್ತಿದ್ದಾರೆ ಎಂದು ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದ್ದು, ಆ ಕರೆಯನ್ನು ನಿರಾಕರಿಸುತ್ತಿರುವುದು ಮೋದಿಯವರ ಕೋಪದ ಆಳವನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರ ಪರೋಕ್ಷ ಎಚ್ಚರಿಕೆಯನ್ನೂ ತೋರಿಸುತ್ತದೆ ಎಂದು ಜರ್ಮನ್ ಪತ್ರಿಕೆಯ ವರದಿ ತಿಳಿಸಿದೆ.
ಟ್ರಂಪ್ ಈ ಹಿಂದೆ ಟು ಲ್ಯಾಮ್ ಅವರೊಂದಿಗಿನ ಫೋನ್ ಕರೆಯ ಸಮಯದಲ್ಲಿ, ಅಮೆರಿಕ ಮತ್ತು ವಿಯೆಟ್ನಾಂ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಮರು ಮಾತುಕತೆ ನಡೆಸಿದ್ದರು ಎನ್ನುವುದನ್ನು ಈ ವೇಳೆ ಉಲ್ಲೇಖಿಸಿದೆ.

