ವಯನಾಡ್ : ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಕುಸಿತ ಸಂಭವಿಸಿದ ಮುಂಡಕೈ ಪ್ರದೇಶದಲ್ಲಿ 18 ಮೃತದೇಹಗಳು ಪತ್ತೆಯಾಗಿದ್ದು, ಚಲಿಯಾರ್ ನದಿಯಿಂದ 5 ಮೃತದೇಹಗಳು ಹಾಗೂ 10 ದೇಹದ ಭಾಗಗಳಲ್ಲಿ ಹೊರತೆಗೆಯಲಾಗಿದೆ. ಇದರಿಂದಾಗಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 350 ಸಮೀಪಿಸಿದೆ.
ಸೇನೆ ಕಾರ್ಯಾಚರಣೆಗೆ ಕೈ ಜೋಡಿಸಿದ್ದು, ನಾಪತ್ತೆಯಾಗಿರುವ ಇನ್ನೂ 280 ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಭಾರತೀಯ ಸೇನೆ, ನೌಕಾದಳ, ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಹಲವು ವಿಭಾಗಗಳು ಸೇರಿದಂತೆ ಒಟ್ಟು 640 ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.
ಸೇನಾ ಹೆಲಿಕಾಪ್ಟರ್ಗಳ ಹೊರತಾಗಿ ಪೊಲೀಸ್ ಇಲಾಖೆಯಿಂದ ನಿಯೋಜಿಸಲ್ಪಟ್ಟ ಹೆಲಿಕಾಪ್ಟರ್ಗಳು ಸಹ ಚಲಿಯಾರ್ ನದಿ ದಡದಲ್ಲಿ ದುರಂತ ಉಂಟಾದ ಸ್ಥಳಗಳಲ್ಲಿ ತಪಾಸಣೆ ನಡೆಸಿವೆ. 84 ಮಂದಿಗೆ ವಯನಾಡ್, ಕೋಯಿಕ್ಕೋಡ್, ಮಳಪ್ಪುರಂ ಜಿಲ್ಲೆಗಳ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, 187 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಸೇನಾ ಸಮವಸ್ತ್ರದಲ್ಲಿ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ ಮೋಹನ್‌ಲಾಲ್ :
ಭಾರಿ ಮಳೆಯಿಂದ ಉಂಟಾದ ಭೂಕುಸಿತದಿಂದ ನಲುಗಿ ಹೋಗಿರುವ ವಯನಾಡಿಗೆ ನಟ ಮೋಹನ್‌ಲಾಲ್ ಅವರು ಆಗಮಿಸಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಆಗಿರುವ ಮೋಹನ್ ಲಾಲ್ ಅವರು ಮೆಪ್ಪಾಡಿ ಆಗಮಿಸಿದಾಗ ಭಾರತೀಯ ಸೇನೆ ಅವರನ್ನು ಬರಮಾಡಿಕೊಂಡಿತು.
ಭೇಟಿಯ ವೇಳೆ ಮೋಹನ್ ಲಾಲ್ ಅವರು ಮಿಲಿಟರಿ ಸಮವಸ್ತ್ರದಲ್ಲಿ ಆಗಮಿಸಿದರು. ಭೂಕುಸಿತದಿಂದ ಹಾನಿಗೊಳಗಾದ ಮುಂಡಕೈಗೆ ಮೋಹನ್‌ಲಾಲ್ ಇಂದು ಭೇಟಿ ನೀಡಲಿದ್ದು, ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಈಗಾಗಲೇ ನಟ ಮೋಹನ್‌ಲಾಲ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

