ಟೆಹ್ರಾನ್: ಅಮೆರಿಕದ ದಾಳಿಯಲ್ಲಿ ಹತ್ಯೆಗೀಡಾದ ಇರಾನ್‌ನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ 56 ವರ್ಷದ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಇರಾನ್‌ನ ನೂತನ ಪರಮೋಚ್ಛ ನಾಯಕನಾಗಿ ದೇಶದ ಶಿಯಾ ಧಾರ್ಮಿಕ ಪಂಡಿತರನ್ನೊಳಗೊಂಡ Assembly of Experts ಆಯ್ಕೆ ಮಾಡಿದೆ ಎಂಬ ಮಾಹಿತಿ ಹೊರಬಂದಿದೆ.
ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್ ಮೊಜ್ತಾಬಾ ಖಮೇನಿಯನ್ನು ಮುಂದಿನ ಪರಮೋಚ್ಛ ನಾಯಕನಾಗಿ ಆಯ್ಕೆ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ Iran International ವರದಿ ಮಾಡಿದೆ.
ಅಲಿ ಖಮೇನಿ ಅವರ ನಿಧನದ ನಂತರ ಈ ಬೆಳವಣಿಗೆ ನಡೆದಿದೆ. ಅಮೆರಿಕಾ–ಇಸ್ರೇಲ್ ದಾಳಿಗಳ ಹಿನ್ನೆಲೆ ಖಮೇನಿ ಹತ್ಯೆಗೀಡಾದ ಪ್ರಕರಣವು ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇರಾನ್‌ನ ಪರಮೋಚ್ಛ ನಾಯಕನ ಸ್ಥಾನವು ರಾಜ್ಯದ ಎಲ್ಲಾ ವಿಷಯಗಳ ಮೇಲೆ ಅಂತಿಮ ಅಧಿಕಾರವನ್ನೂ, ಸಶಸ್ತ್ರ ಪಡೆಗಳು ಹಾಗೂ ಪ್ರಭಾವಶಾಲಿ ರೆವಲ್ಯೂಷನರಿ ಗಾರ್ಡ್ ಮೇಲಿನ ನಿಯಂತ್ರಣವನ್ನೂ ಹೊಂದಿರುತ್ತದೆ.
ಮೊಜ್ತಾಬಾ ಖಮೇನಿ ಯಾರು?
ಮೊಜ್ತಾಬಾ ಖಮೇನಿ ಅವರು ಇತ್ತೀಚೆಗೆ ಮೃತಪಟ್ಟ ಅಲಿ ಖಮೇನಿ ಅವರ ಎರಡನೇ ಪುತ್ರ. ಅವರ ಆಯ್ಕೆ ರಾಜಕೀಯವಾಗಿ ಸಂವೇದನಾಶೀಲ ವಿಚಾರವಾಗಿ ಪರಿಣಮಿಸಬಹುದು. ಏಕೆಂದರೆ ಇಸ್ಲಾಮಿಕ್ ರಿಪಬ್ಲಿಕ್ ದೀರ್ಘಕಾಲದಿಂದ ವಂಶಪಾರಂಪರ್ಯ ಆಡಳಿತವನ್ನು ಟೀಕಿಸುತ್ತಿದ್ದು, ತಾವು ರಾಜಶಾಹಿಗೆ ಪರ್ಯಾಯ ವ್ಯವಸ್ಥೆಯೆಂದು ಹೇಳಿಕೊಂಡಿದೆ.
ಮಧ್ಯಮ ಹುದ್ದೆಯ ಧಾರ್ಮಿಕ ಪಂಡಿತರಾಗಿ ಗುರುತಿಸಿಕೊಂಡಿರುವ ಮೊಜ್ತಾಬಾ, ಇರಾನ್–ಇರಾಕ್ ಯುದ್ಧದ ಸಮಯದಲ್ಲಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ತಂದೆಯ ಆಡಳಿತಾವಧಿಯಲ್ಲಿ ರಾಜಕೀಯ, ಸೈನಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಪ್ರಭಾವ ವಿಸ್ತರಿಸಿಕೊಂಡಿರುವ Islamic Revolutionary Guard Corps (IRGC) ಜೊತೆ ಅವರು ದೀರ್ಘಕಾಲದ ಸಂಪರ್ಕ ಹೊಂದಿದ್ದಾರೆ.
2019ರಲ್ಲಿ ಅಮೆರಿಕಾದಿಂದ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲ್ಪಟ್ಟ ಐಆರ್‌ಜಿಸಿ, ಮೊಜ್ತಾಬಾವನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ. ಧಾರ್ಮಿಕ ಪಂಡಿತರ ಗುಂಪಿನ ಮೇಲೆ ಒತ್ತಡ ತಂದು ಅವರ ಆಯ್ಕೆಗೆ ಪ್ರಭಾವ ಬೀರಿದೆಯೆಂಬ ವರದಿಗಳೂ ಕೇಳಿಬಂದಿವೆ.
ಮೊಜ್ತಾಬಾ ಖಮೇನಿ ಪ್ರಾಯೋಗಿಕವಾಗಿ ಪರಮೋಚ್ಛ ನಾಯಕನ ಕಚೇರಿಯನ್ನು ನಿರ್ವಹಿಸುತ್ತಿದ್ದರೆಂದು ಹಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಐಆರ್‌ಜಿಸಿ ಜೊತೆಗಿನ ಅವರ ಆಪ್ತ ಸಂಬಂಧಗಳು ಮತ್ತು ಸಶಸ್ತ್ರ ಪಡೆಗಳಲ್ಲಿನ ಅನುಭವವು ಪ್ರಾದೇಶಿಕವಾಗಿ ಸಂವೇದನಾಶೀಲ ಸಮಯದಲ್ಲಿ ಇರಾನ್‌ನ ನಿರ್ಧಾರ ಪ್ರಕ್ರಿಯೆಯನ್ನು ಪ್ರಭಾವಿತಗೊಳಿಸುವ ಸಾಧ್ಯತೆ ಇದೆ.

