ಬೆಂಗಳೂರು: ರಾಜ್ಯದಲ್ಲಿ ಅನರ್ಹವಾಗಿ ಬಿಪಿಎಲ್ (BPL) ಕಾರ್ಡ್ ಹೊಂದಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಕಳೆದ ಐದು ತಿಂಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಮಂದಿಗೆ ದೊಡ್ಡ ಆಘಾತವಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನರ್ಹರನ್ನು ಗುರುತಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಸಾವಿರಾರು ಪಡಿತರ ಚೀಟಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯ ಭಾಗವಾಗಿ ಸುಮಾರು 5,632 ಬಿಪಿಎಲ್ ಕಾರ್ಡ್‌ಗಳನ್ನು ಶಾಶ್ವತವಾಗಿ ರದ್ದುಪಡಿಸಲಾಗಿದೆ. ಜೊತೆಗೆ 4.09 ಲಕ್ಷ ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಇನ್ನೂ 23,068 ಬಿಪಿಎಲ್ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.
ಕಳೆದ 5 ತಿಂಗಳ ಕಾರ್ಯಾಚರಣೆ ವಿವರ
ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆಗೊಂಡ ಕಾರ್ಡ್‌ಗಳು: 4.09 ಲಕ್ಷ (14,68,540 ಮಂದಿ ಪ್ರಭಾವಿತ)
ಶಾಶ್ವತವಾಗಿ ರದ್ದಾದ ಬಿಪಿಎಲ್ ಕಾರ್ಡ್‌ಗಳು: 5,632 (9,826 ಮಂದಿ ಪ್ರಭಾವಿತ)
ತಾತ್ಕಾಲಿಕವಾಗಿ ಅಮಾನತ್ತಾದ ಬಿಪಿಎಲ್ ಕಾರ್ಡ್‌ಗಳು: 23,068 (34,617 ಮಂದಿ ಪ್ರಭಾವಿತ)
ಇನ್ನೊಂದೆಡೆ, ಅರ್ಹರಾದ ಬಡವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಕಾರು, ಬಂಗಲೆ ಹಾಗೂ ಜಮೀನು ಹೊಂದಿರುವವರೂ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂಬುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನರ್ಹರನ್ನು ಗುರುತಿಸಿ ಅವರ ಕಾರ್ಡ್‌ಗಳನ್ನು ರದ್ದು ಮಾಡುವ ಕಾರ್ಯಾಚರಣೆಯನ್ನು ಇನ್ನಷ್ಟು ಕಠಿಣಗೊಳಿಸಬೇಕು. ಕಡುಬಡವರು ಹಾಗೂ ದುಡಿದು ತಿನ್ನುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದಕ್ಕೂ ಮೊದಲು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು ಪರಿಷ್ಕರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದ್ದರು. ಕೇಂದ್ರ ಸರ್ಕಾರ ಪ್ರಸ್ತುತ ಬಿಪಿಎಲ್ ಕಾರ್ಡ್‌ದಾರರ ವಾರ್ಷಿಕ ಆದಾಯ ಮಿತಿಯನ್ನು ₹1.20 ಲಕ್ಷ ಎಂದು ನಿಗದಿಪಡಿಸಿದೆ.
ಆದರೆ ದಿನಗೂಲಿ ಕಾರ್ಮಿಕರಿಗೂ ದಿನಕ್ಕೆ ಸುಮಾರು ₹500 ಸಂಬಳ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಅವರ ವಾರ್ಷಿಕ ಆದಾಯವೂ ₹1.80 ಲಕ್ಷಕ್ಕಿಂತ ಹೆಚ್ಚು ಆಗುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದ್ದರು. ಹೀಗಾಗಿ ಆದಾಯ ಮಿತಿಯನ್ನು ಪರಿಷ್ಕರಿಸುವ ಬಗ್ಗೆ ಚರ್ಚೆ ನಡೆದಿತ್ತು.
ಇತ್ತೀಚಿನ ಕ್ರಮಗಳಿಂದ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಕಠಿಣ ಸಂದೇಶ ನೀಡಲಾಗಿದೆ.

