ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕಿದ್ದು, ಸಿಎಂ ಪತ್ನಿಯಿಂದ ಹಣ ಪಡೆದು ತಹಸೀಲ್ದಾರ್ ಅವರೇ ಮುದ್ರಾಂಕಶುಲ್ಕ ಪಾವತಿಸಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಅವರು, ಮುಡಾ ಹಗರಣದಲ್ಲಿ ನಾವು ಯಾವ ಪ್ರಭಾವ ಬೀರಿಲ್ಲ ಎಂದು ಹೇಳುತ್ತಾ ಬಂದಿರುವ ಸಿಎಂ ಸಿದ್ದರಾಮಯ್ಯನವರೇ, ಇಲ್ಲಿ ನೋಡಿ ನಿಮ್ಮ ಅಧಿಕಾರದ ದುರುಪಯೋಗ ಪಡಿಸಿಕೊಂಡಿರುವ ಮತ್ತೊಂದು ಸಾಕ್ಷಿ ನೋಡಿ ಎಂದು ಬರೆದುಕೊಂಡಿದ್ದಾರೆ.
ಕರಪತ್ರ ನೊಂದಣಿ ಮಾಡಿಸಿಕೊಳ್ಳುವವರು ನೊಂದಣಿಗೆ ಸಂಬಂಧಿಸಿದ ಶುಲ್ಕಗಳನ್ನು ಪಾವತಿ ಮಾಡಬೇಕು, ಅದೇ ರೀತಿ ತಹಶೀಲ್ದಾರ್ ಎನ್.ಮಂಜುನಾಥ್ ರವರು ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಅಲ್ಲದೇ ಸಿದ್ದರಾಮಯ್ಯನವರ ಪತ್ನಿ ಶ್ರೀಮತಿ ಪಾರ್ವತಿರವರ ಕರಪತ್ರದಲ್ಲಿ ಮುಡಾದ ವಿಶೇಷ ತಹಸೀಲ್ದಾರ್ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ ಎಂಬುದು ಖಚಿತವಾಗಿ ತಿಳಿದುಬರುತ್ತದೆ. ನನ್ನ ಆರೋಪಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ? ಸಿದ್ದರಾಮಯ್ಯ ರಾಜ್ಯದ ಜನತೆಗೆ ಉತ್ತರಿಸುವರೆ.? ಎಂದು ಪ್ರಶ್ನಿಸಿದ್ದಾರೆ.
ಯತೀಂದ್ರ ಪ್ರತಿಕ್ರಿಯೆ :
ಮುಡಾ ಹಗರಣದ ಬಗ್ಗೆ ಸ್ನೇಹಮಯಿ ಕೃಷ್ಣ ಮಾಡಿರುವ ಆರೋಪದ ಬಗ್ಗೆ ಮಾತನಾಡಿದ ಅವರು, ಆ ಸಮಯದಲ್ಲಿ ನನ್ನ ತಾಯಿಗೆ ಹುಷಾರಿರಲಿಲ್ಲ, ರಿಜಿಸ್ಟ್ರೇಷನ್ ಫೀ ತುಂಬಿದ್ರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಿದ್ದರಾಮಯ್ಯ ಅವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿದೆ. ನನಗೆ ನ್ಯಾಯ ಸಿಗದಿದ್ದರೆ ನಾನು ಕೋರ್ಟ್ಗೆ ಹೋಗುತ್ತೇನೆ ಎಂದು ಸ್ನೇಹಮಯಿ ಎಚ್ಚರಿಕೆ ನೀಡಿದ್ದರು.
ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ನೋಟಿಸ್ ನೀಡಿರುವುದರ ಕುರಿತು ಪ್ರತಿಕ್ರಿಯೆ ನೀಡಿರುವ ಸ್ನೇಹಮಯಿ ಕೃಷ್ಣ, ಮುಡಾ ಹಗರಣ ಸಂಬಂಧ ನನ್ನ ಬಳಿ ಇರುವ ಸಾಕ್ಷ್ಯಗಳನ್ನ ನಾನು ನೀಡಿದ್ದೇನೆ. ಆ ಸಾಕ್ಷ್ಯಗಳ ಆಧಾರದ ಮೇಲೆ ಸಿದ್ದರಾಮಯ್ಯ ಅವರಿಗೆ ಶಿಕ್ಷೆ ಆಗಬಹುದು ಎಂದು ನಂಬಿದ್ದೇನೆ. ಆದರೆ ನನಗೆ ಮೊದಲಿನಿಂದಲೂ ಕೂಡ ಲೋಕಾಯುಕ್ತದ ಮೇಲೆ ನಂಬಿಕೆ ಇಲ್ಲ. ಈಗ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ನಾನು ಅರ್ಜಿ ಸಲ್ಲಿಸಿರುವೆ ಎಂದು ಹೇಳಿದ್ದರು.
ಮುಡಾ ಹಗರಣ ಸಂಬಂಧ ನಾನು ಆರಂಭದಿಂದಲೂ ತನಿಖೆಗೆ ಒತ್ತಾಯ ಮಾಡುತ್ತಲೇ ಬಂದಿದ್ದೇನೆ. ಕೊನೆಗೂ ಸಿದ್ದರಾಮಯ್ಯ ಅವರ ವಿಚಾರಣೆ ನಡೆಸುತ್ತಿರುವುದು ನನಗೆ ಖುಷಿ ತಂದಿದೆ. ನಾನು ಲೋಕಾಯುಕ್ತ ಅಧಿಕಾರಿಗಳಿಗೆ 50 ಪ್ರಶ್ನೆಗಳ ಮನವಿ ಪತ್ರ ನೀಡಿರುವೆ ಎಂದಿದ್ದರು.