ಬೆಂಗಳೂರು: ಬೆಂಗಳೂರು ಹೊರವಲಯದ ನೆಲಮಂಗಲ ಹೆದ್ದಾರಿಯ ಜಿಂದಾಲ್ ಮೇಲ್ಸೇತುವೆ ಬಳಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಯುವಕರು ದುರ್ಮರಣ ಹೊಂದಿರುವ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ.
ಹೊಸಕೋಟೆ ಬಳಿ ಎರಡು ದಿನಗಳ ಹಿಂದೆ ನಡೆದ ಭೀಕರ ಅಪಘಾತದ ನೋವು ಇನ್ನೂ ಮಾಸುವ ಮುನ್ನವೇ ಈ ದುರಂತ ಸಂಭವಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್ ಮತ್ತು ಇಂಡಿಕಾ ಕಾರಿನ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಐವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರಲ್ಲಿ ದೊಡ್ಡಬಳ್ಳಾಪುರ ಮೂಲದ ಹರ್ಷಿತ್, ನಿಖಿತ್ ಸೇರಿದಂತೆ ಇನ್ನಿತರರು ಸೇರಿದ್ದಾರೆ. ತುಮಕೂರು ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ಇಂಡಿಕಾ ಕಾರು ಡಿವೈಡರ್ ಜಿಗಿದು, ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಬಸ್ ಮುಂಭಾಗಕ್ಕೂ ಹಾನಿಯಾಗಿದೆ.
ಘಟನೆ ಕಳೆದ ರಾತ್ರಿ ಸುಮಾರು 11.30ರ ಸುಮಾರಿಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿಂದಾಲ್ ಫ್ಲೈಓವರ್ ಮೇಲೆ ನಡೆದಿದೆ. ಕಾರಿನಲ್ಲಿ ಐವರು ಸ್ನೇಹಿತರು ಜಾಲಿ ರೈಡ್‌ಗೆ ತೆರಳಿದ್ದು, ವಾಪಸ್ಸಾಗುವ ವೇಳೆ ದುರಂತ ಸಂಭವಿಸಿದೆ ಎನ್ನಲಾಗಿದೆ. ಅತಿವೇಗವೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ.
ಅಪಘಾತದ ವೇಳೆ ಬಸ್‌ನಲ್ಲಿ ಸುಮಾರು 45 ಪ್ರಯಾಣಿಕರು ಇದ್ದರೂ, ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತನು ಸಹ ಮೃತಪಟ್ಟಿದ್ದಾನೆ. ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸಾವಿಗೀಡಾದವರಲ್ಲಿ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮೃತ ಹರ್ಷಿತ್ ರಾಜನಕುಂಟೆಯ ಸಾಯಿ ವಿದ್ಯಾ ಕಾಲೇಜಿನ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ ಎಂಬ ಮಾಹಿತಿ ಲಭ್ಯವಾಗಿದೆ. ಸ್ನೇಹಿತರೆಲ್ಲರೂ ದೊಡ್ಡಬಳ್ಳಾಪುರ ಮೂಲದವರಾಗಿದ್ದು, ಕುಟುಂಬದವರಿಗೆ ತಿಳಿಸದೆ ಔಟಿಂಗ್‌ಗೆ ತೆರಳಿದ್ದರೆಂದು ತಿಳಿದುಬಂದಿದೆ.
ಇತ್ತೀಚೆಗೆ ಸಂಭವಿಸುತ್ತಿರುವ ಸರಣಿ ಅಪಘಾತಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯ ಮತ್ತೊಮ್ಮೆ ಸಾಬೀತಾಗಿದೆ.

