ಮಂಗಳೂರು : ಧರ್ಮಸ್ಥಳ ಪ್ರಕರಣ ಮತ್ತೊಂದು ಹಂತಕ್ಕೆ ತಲುಪಿದ್ದು, ಮತ್ತೆ ಬಂಗ್ಲೆಗುಡ್ಡೆಯಲ್ಲಿ ಶವಗಳ ಕಳೇಬರ, ಬುರುಡೆ ಸಿಕ್ಕಿರುವ ಬಗ್ಗೆ ವಿಠಲಗೌಡ ಸ್ಫೋಟಕ ಹೇಳಿಕೆ ಕೊಟ್ಟ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
ಇದೀಗ ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನಲ್ಲಿ ರಾಶಿ ರಾಶಿ ಮೂಳೆಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ಪತ್ತೆಯಾದ ಮೂಳೆಗಳನ್ನು ವಶಕ್ಕೆ ಪಡೆದ ಎಸ್ ಐ ಟಿ ಬ್ಯಾಗ್ ನಲ್ಲಿ ತುಂಬಿಕೊಂಡು ಹೋಗಿದೆ.
ಧರ್ಮಸ್ಥಳದ ನೇತ್ರಾವತಿ ನದಿ ತೀರದ ಬಂಗ್ಲಗುಡ್ದ ಪ್ರದೇಶದಲ್ಲಿ ವಿಠಲಗೌಡ ಬುರುಡೆ ತಂದಿರುವ ಜಾಗದಲ್ಲಿ ಎಸ್ ಐಟಿ ಅಧಿಕಾರಿಗಳು ಇಂದು ಮಹಜರು ನಡೆಸಿದ್ದರು.
ಧರ್ಮಸ್ಥಳದ ವಿವಿಧೆಡೆ ಹೆಣಗಳನ್ನು ಹೂತಿಟ್ಟಿರುವುದಾಗಿ ಹೇಳಿದ್ದ ಚಿನ್ನಯ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ಮುಂದುವರೆಸಿತ್ತು. ಬಂಗ್ಲಗುಡ್ಡದಲ್ಲಿ ತಾನು ಹೆಣಗಳ ರಾಶಿ ನೋಡಿದ್ದೇನೆ. ಮೊದಲ ಬಾರಿ ಸ್ಥಳ ಮಹಜರಿಗೆ ಹೋದಾಗ ಮೂರು ಅಸ್ಥಿಪಂಜರವನ್ನು ನೋಡಿದ್ದೇನೆ.
ಎರಡನೇ ಬಾರಿ ಹೋದಾಗ ಬಂಗ್ಲಗುಡ್ಡದಲ್ಲಿ ಮರದ ಕೆಳಭಾಗದಲ್ಲಿ ಹೆಣಗಳ ರಾಶಿ ಕಂಡಿದ್ದೇನೆ. ನನ್ನ ಕಣ್ಣಿಗೆ ಐದು ಅಸ್ಥಿಪಂಜರಗಳು ಕಂಡಿವೆ. ಅದರ ಬಳಿಯೇ ವಾಮಾಚಾರಕ್ಕೆ ಬಳಸುವ ಕೆಲ ವಸ್ತುಗಳು ಕೂಡ ಇದ್ದವು ಎಂದು ಸ್ಫೋಟಕ ಹೇಳಿಕೆ ನೀಡಿದ್ದನು. ಈ ಹಿನ್ನೆಲೆ ಎಸ್ ಐಟಿ ಅಧಿಕಾರಿಗಳು ಬಂಗ್ಲಗುಡ್ಡದಲ್ಲಿ ಮತ್ತೆ ಶೋಧಕಾರ್ಯ ಮುಂದುವರೆಸಿದ್ದರು

