ಲಖನೌ : ನೈಜ ಆರೋಪಿಗಳನ್ನು ಹಿಡಿಯುವಲ್ಲಿ ವಿಫಲವಾಗಿರುವ ರಾಜ್ಯ ಪೊಲೀಸರು ಅದನ್ನು ಮರೆಮಾಚಲು ನಕಲಿ ಎನ್ಕೌಂಟರ್ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರಿಂದ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಪೊಲೀಸ್ ಎನ್ಕೌಂಟರ್ಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಹೊಸ ಮಾರ್ಗಸೂಚಿಗಳ ಅನ್ವಯ ಎನ್ಕೌಂಟರ್ ಸ್ಥಳದ ವಿಡಿಯೊ ಮತ್ತು ಮರಣೋತ್ತರ ಪರೀಕ್ಷೆ ಕಡ್ಡಾಯವಾಗಿದೆ. ಹೊಸ ಮಾರ್ಗಸೂಚಿಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಅಗತ್ಯ ನಿರ್ದೇಶನ ನೀಡಲಾಗಿದೆ ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಹೊಸ ಮಾರ್ಗಸೂಚಿಯ ಪ್ರಕಾರ, ಅಪರಾಧಿ ಗಾಯಗೊಂಡರೆ ಅಥವಾ ಮೃತಪಟ್ಟರೆ, ಎನ್ಕೌಂಟರ್ ನಡೆದ ಸ್ಥಳದ ವಿಡಿಯೊ ಮಾಡುವುದು ಕಡ್ಡಾಯ. ಇಬ್ಬರು ವೈದ್ಯರನ್ನು ಒಳಗೊಂಡ ತಂಡ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಬೇಕು. ಅದನ್ನು ವಿಡಿಯೊ ಮಾಡಬೇಕು.
ವಿಧಿ ವಿಜ್ಞಾನ ಪ್ರಯೋಗಾಲಯ ತಂಡವು ಎನ್ಕೌಂಟರ್ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಬೇಕು. ಎನ್ಕೌಂಟರ್ ನಡೆದಿರುವ ಠಾಣೆಯ ವ್ಯಾಪ್ತಿಯ ಪೊಲೀಸರಿಗೆ ತನಿಖೆ ನಡೆಸುವ ಅಧಿಕಾರವಿಲ್ಲ. ಎನ್ಕೌಂಟರ್ನಲ್ಲಿ ಭಾಗಿಯಾಗಿರುವ ಅಧಿಕಾರಿಗಿಂತ ತನಿಖಾಧಿಕಾರಿ ಕನಿಷ್ಠ ಒಂದು ರ್ಯಾಂಕ್ ಉನ್ನತ ಶ್ರೇಣಿಯವರಾಗಿರಬೇಕು. ಎನ್ಕೌಂಟರ್ನಲ್ಲಿ ಮೃತಪಟ್ಟ ವ್ಯಕ್ತಿಯ ಬಗ್ಗೆ ಆತನ ಸಂಬಂಧಿಕರಿಗೆ ತಕ್ಷಣ ಮಾಹಿತಿ ನೀಡಬೇಕು.
207 ಎನ್ಕೌಂಟರ್ ಮಾಡಿದ ಯೋಗಿ ಸರ್ಕಾರ :
2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎನ್ಕೌಂಟರ್ ನಡೆದಿವೆ ಎಂದು ವರದಿಯಾಗಿದೆ. ಯೋಗಿ ಆದಿತ್ಯನಾಥ ಅವರು ಅಧಿಕಾರ ವಹಿಸಿಕೊಂಡ(2017) ನಂತರ ರಾಜ್ಯದಲ್ಲಿ 207 ಅಪರಾಧಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಅಂಕಿಅಂಶಗಳು ಬಹಿರಂಗಪಡಿಸಿವೆ. ಪೊಲೀಸ್ ಮೂಲಗಳ ಪ್ರಕಾರ, ಕಳೆದ 7 ವರ್ಷಗಳಲ್ಲಿ ರಾಜ್ಯದಲ್ಲಿ 12 ಸಾವಿರಕ್ಕೂ ಹೆಚ್ಚು ಎನ್ಕೌಂಟರ್ಗಳು ನಡೆದಿವೆ. ಈ ಅವಧಿಯಲ್ಲಿ 207 ಅಪರಾಧಿಗಳು ಹಾಗೂ 17 ಪೊಲೀಸರು ಮೃತಪಟ್ಟಿದ್ದಾರೆ. 6,500 ಕ್ಕೂ ಹೆಚ್ಚು ಅಪರಾಧಿಗಳು ಗಾಯಗೊಂಡಿದ್ದಾರೆ.