ನವದೆಹಲಿ: ಇಂದು ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ ಬಗ್ಗೆ ಭರ್ಜರಿ ಚರ್ಚೆ ನಡೆಯಿತು. ಪಾಕಿಸ್ತಾನ ಜೊತೆಗೆ ಭಾರತದ ಕದನ ವಿರಾಮವು ಪಾಕಿಸ್ತಾನವು ನಮಗೆ ತಾಕತ್ತು ಇಲ್ಲ ಎಂದು ಅಂಗಲಾಚಿದ ಮೇಲೆಯೇ ನಡೆದಿದ್ದು ಎಂದು ಪ್ರಧಾನಿ ಮೋದಿ ಲೋಕಸಭೆಗೆ ತಿಳಿಸಿದರು. ಈ ಮೂಲಕ ಕದನ ವಿರಾಮದಲ್ಲಿ ಯಾವುದೇ ರಾಷ್ಟ್ರದ ಮಧ್ಯಸ್ಥಿಕೆ ಇಲ್ಲ ಎಂದು ಖಚಿತಪಡಿಸಿದರು.
‘ನಿಲ್ಲಿಸಿ, ನಮಗೆ ಸಾಕಷ್ಟು ಹೊಡೆತ ಬಿದ್ದಿದೆ, ನಮಗೆ ಹೆಚ್ಚಿನ ಹೊಡೆತಗಳನ್ನು ತೆಗೆದುಕೊಳ್ಳುವ ಶಕ್ತಿ ಇಲ್ಲ. ದಯವಿಟ್ಟು ದಾಳಿಯನ್ನು ನಿಲ್ಲಿಸಿ!” ಎಂದು ಪಾಕಿಸ್ತಾನದ ಡಿಜಿಎಂಓ ಅಂಗಲಾಚಿದರು. ಇದು ಪಾಕಿಸ್ತಾನದ ಪರಿಸ್ಥಿತಿ. ಹಾಗಾಗಿ, ನಾವು ನಮ್ಮ ಗುರಿಯನ್ನು ಸಾಧಿಸಿದ್ದೇವೆ ಎಂದು ಭಾರತ ಈಗಾಗಲೇ ಮೇ 7 ನೇ ತಾರೀಖಿನಂದು ಹೇಳಿತ್ತು. ಪಾಕಿಸ್ತಾನ ಏನಾದರೂ ಮಾಡಿದರೆ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಅಂದೇ ಸ್ಪಷ್ಟ ಪಡಿಸಿದ್ದೇವೆ’ ಎಂದು ಮೋದಿ ಸ್ಪಷ್ಟಪಡಿಸಿದರು.
ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ‘ಭಾರತದ ದಾಳಿ ಹೇಗಿತ್ತು ಎಂದರೆ, ಪಾಕಿಸ್ತಾನದ ಕೆಲವು ವಾಯುನೆಲೆಗಳು ಮತ್ತು ಸಂಪತ್ತುಗಳು ಇನ್ನೂ ಐಸಿಯುನಲ್ಲಿವೆ. ಇದರೊಂದಿಗೆ, ‘ಪರಮಾಣು ಬ್ಲ್ಯಾಕ್‌ಮೇಲಿಂಗ್ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಭಾರತವು ಆಪರೇಷನ್ ಸಿಂಧೂರ ಮೂಲಕ ಸಾಬೀತುಪಡಿಸಿದ್ದು, ಇದರೊಂದಿಗೆ, ಈ ಪರಮಾಣು ಬ್ಲ್ಯಾಕ್‌ಮೇಲಿಂಗ್‌ಗೆ ಭಾರತವೂ ಎಂದಿಗೂ ತಲೆಬಾಗುವುದಿಲ್ಲ’ ಎಂದು ಹೇಳಿದರು.
‘ಪಹಲ್ಗಾಮ್ ದಾಳಿಯ ನಂತರ, ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಪಾಕಿಸ್ತಾನಕ್ಕೆ ಅರ್ಥವಾಗಿತ್ತು. ಹೀಗಾಗಿ, ಅವರು ಪರಮಾಣು ಬಾಂಬದ ದಾಳಿ ಬೆದರಿಕೆ ಹಾಕಿದರು. ಆದ್ರೆ, ಮೇ 6-7 ರಂದು, ಭಾರತ ಏಪ್ರಿಲ್ 22 ರ ದಾಳಿಗೆ ಪ್ರತೀಕಾರವಾಗಿ 22 ನಿಮಿಷಗಳಲ್ಲಿ ಸೇಡು ತೀರಿಸಿಕೊಂಡಿತು’ ಎಂದು ಮೋದಿ ಹೇಳಿದರು.
“ಪಹಲ್ಗಾಮ್ ದಾಳಿಯ ನಂತರ, ಭಯೋತ್ಪಾದನೆ ನಿರ್ಮೂಲನೆ ಮಾಡುವುದಾಗಿ ನಾನು ಭರವಸೆ ನೀಡಿದ್ದೆ, ಆದರಂತೆ, ಸೇನೆಗೆ ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವು. ಅಲ್ಲಿ, ಸೈನ್ಯವು ಯಾವಾಗ, ಎಲ್ಲಿ, ಹೇಗೆ, ಯಾವ ರೀತಿಯಲ್ಲಿ ದಾಳಿ ಮಾಡಲು ನಿರ್ಧರಿಸುವಂತೆ ಹೇಳಲಾಯಿತು. ಅದರಂತೆ, ನಾವು, ಭಯೋತ್ಪಾದಕರಿಗೆ ಪಾಠವವಕಲಿಸಿದೆವು, ಆ ಶಿಕ್ಷೆ ಎಷ್ಟಿತ್ತೆಂದರೆ ಇಂದಿಗೂ ಆ ಭಯೋತ್ಪಾದನೆಯ ಗುರುಗಳು ನಿದ್ರಿಸಲು ಸಾಧ್ಯವಾಗಿಲ್ಲ’ ಎಂದು ಮೋದಿ ಹೇಳಿದರು.
‘ಪಾಕಿಸ್ತಾನದ ಜೊತೆಗಿನ ಸಂಘರ್ಷದ ವೇಳೆ, ಜಗತ್ತಿನ ಯಾವುದೇ ದೇಶವು ಭಾರತವನ್ನು ತಡೆದಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದ ಪ್ರಧಾನಿ, ‘ಭಾರತದ ಪ್ರತಿಕಾರದ ನಂತರ ಜಗತ್ತಿನ 193 ರಾಷ್ಟ್ರಗಳ ಪೈಕಿ ಕೇವಲ ಮೂರು ದೇಶಗಳು ಮಾತ್ರ ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡಿವೆ. ದೇಶದ ವೀರರ ಶೌರ್ಯಕ್ಕೆ ಕಾಂಗ್ರೆಸ್ ಬೆಂಬಲ ಸಿಗದಿರುವುದು ದುರದೃಷ್ಟಕರ’ ಎಂದು ಪ್ರಧಾನಿ ಮೋದಿ ಹೇಳಿದರು.
‘ಕ್ವಾಡ್ ಆಗಿರಲಿ, ಬ್ರಿಕ್ಸ್ ಆಗಿರಲಿ, ಯಾವುದೇ ದೇಶವಾಗಿರಲಿ, ಭಾರತಕ್ಕೆ ಪ್ರಪಂಚದಾದ್ಯಂತ ಬೆಂಬಲ ಸಿಕ್ಕಿದೆ. ನಾವು ವಿದೇಶಾಂಗ ನೀತಿಯ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಿದ್ದೇನೆ, ನಮಗೆ ಪ್ರಪಂಚದ ಬೆಂಬಲ ಸಿಕ್ಕಿತು, ಆದರೆ ದುರದೃಷ್ಟವಶಾತ್ ನನ್ನ ದೇಶದ ವೀರರ ಶೌರ್ಯಕ್ಕೆ ಕಾಂಗ್ರೆಸ್ ಬೆಂಬಲ ಸಿಗಲಿಲ್ಲ’ ಎಂದು ಕಿಡಿ ಕಾರಿದರು. ‘ಪಹಲ್ಗಾಮ್‌ನ ಮುಗ್ಧ ಜನರ ಹತ್ಯೆಯಲ್ಲೂ ಕಾಂಗ್ರೆಸ್ ತನ್ನ ರಾಜಕೀಯವನ್ನು ಮಾಡಿತು’ ಎಂದು ಮೋದಿ ಅಸಮಾಧಾನ ಹೊರ ಹಾಕಿದರು.

