ನವದೆಹಲಿ: ‘ಅಡತಡೆಗಳಿಲ್ಲದ ಹೆದ್ದಾರಿ ಸಂಚಾರಕ್ಕಾಗಿ ಖಾಸಗಿ ವಾಹನಗಳಿಗೆ ₹3 ಸಾವಿರಕ್ಕೆ ಫಾಸ್ಟ್ಯಾಗ್ ವಾರ್ಷಿಕ ಪಾಸ್ ವಿತರಿಸುವ ಯೋಜನೆ ಅ. 15ರಿಂದ ಜಾರಿಗೆ ಬರಲಿದೆ’ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ‘ಈ ವಾರ್ಷಿಕ ಪಾಸ್ ಒಂದು ವರ್ಷದ ಅವಧಿ ಅಥವಾ 200 ಟ್ರಿಪ್ಗಳಿಗೆ ಅನ್ವಯಿಸಲಿದೆ. ಇದನ್ನು ವಾಣಿಜ್ಯ ಉದ್ದೇಶಕ್ಕಲ್ಲದ ವಾಹನಗಳಿಗೆ ಮಾತ್ರ ವಿತರಿಸಲಾಗುವುದು. ಇದರಲ್ಲಿ ಕಾರು, ಜೀಪು ಮತ್ತು ವ್ಯಾನ್ಗಳು ಸೇರುತ್ತವೆ” ಎಂದಿದ್ದಾರೆ. ‘ಈ ವಾರ್ಷಿಕ ಪಾಸ್ ಪಡೆದು ದೇಶದ ಉದ್ದಗಲದ ಯಾವುದೇ ಹೆದ್ದಾರಿಯಲ್ಲಿ ಮುಕ್ತವಾಗಿ ಸಂಚರಿಸಬಹುದು. ಹೊಸ ಪಾಸ್ ಪಡೆಯುವ ಅಥವಾ ನವೀಕರಿಸುವ ಸೌಲಭ್ಯವು ಶೀಘ್ರದಲ್ಲಿ ರಾಜ್ ಮಾರ್ಗ್ ಯಾತ್ರಾ ಆ್ಯಪ್ನಲ್ಲಿ ಲಭ್ಯ. ಇದರೊಂದಿಗೆ NHAI ಮತ್ತು MoRTH ಅಂತರ್ಜಾಲ ಪುಟಗಳಲ್ಲೂ ಲಭ್ಯ’ ಎಂದು ತಿಳಿಸಿದ್ದಾರೆ.
ಗಡ್ಕರಿ ಹೇಳಿದ್ದೇನು?
ನಾವು 3 ಸಾವಿರ ರೂ.ಗೆ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿದ್ದು ಆಗಸ್ಟ್ 15, 2025 ರಿಂದ ಜಾರಿಗೆ ಬರುತ್ತದೆ. ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್ಗಳವರೆಗೆ ಮಾನ್ಯವಾಗಿರುತ್ತದೆ. ಇದನ್ನೂ ಓದಿ: ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್ ಹಾಕುತ್ತಾ?
ಈ ಪಾಸ್ ಅನ್ನು ಕಾರುಗಳು, ಜೀಪ್ಗಳು ಮತ್ತು ವ್ಯಾನ್ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ನವೀಕರಣಕ್ಕಾಗಿ ಮೀಸಲಾದ ಲಿಂಕ್ ಅನ್ನು ಶೀಘ್ರದಲ್ಲೇ ರಾಜ್ಮಾರ್ಗ್ ಯಾತ್ರಾ ಅಪ್ಲಿಕೇಶನ್ನಲ್ಲಿ ಹಾಗೂ NHAI ಮತ್ತು MoRTH ನ ಅಧಿಕೃತ ವೆಬ್ಸೈಟ್ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.
ಈ ಪಾಸ್ನಿಂದ 60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಗಳು ಪರಿಹಾರವಾಗಲಿದೆ. ಟೋಲ್ಗಳಲ್ಲಿ ಕಾಯುವ ಸಮಯ ಮತ್ತು ದಟ್ಟಣೆ ಕಡಿಮೆ ಯಾಗಲಿದೆ. ಟೋಲ್ ಪ್ಲಾಜಾಗಳಲ್ಲಿ ವಿವಾದಗಳು ಕಡಿಮೆಯಾಗಲಿದ್ದು ಲಕ್ಷಾಂತರ ಖಾಸಗಿ ವಾಹನ ಮಾಲೀಕರಿಗೆ ಸುಗಮ ಪ್ರಯಾಣದ ಅನುಭವವನ್ನು ವಾರ್ಷಿಕ ಪಾಸ್ ನೀಡಲಿದೆ.