ಬೆಂಗಳೂರು, ಫೆಬ್ರವರಿ 20: ರಾಜ್ಯದ ಪುರುಷ ಪ್ರಯಾಣಿಕರಿಗೆ ತಾತ್ಕಾಲಿಕ ನಿರಾಳತೆ ಸಿಕ್ಕಿದೆ. ಸದ್ಯಕ್ಕೆ ಸಾರಿಗೆ ಬಸ್ ಪ್ರಯಾಣ ದರವನ್ನು ಹೆಚ್ಚಿಸುವ ಯಾವುದೇ ಯೋಜನೆ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಈ ಕುರಿತು ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿ, “ಈಗ ದರ ಏರಿಕೆ ಮಾಡುವ ಪ್ರಶ್ನೆಯೇ ಇಲ್ಲ. ಮುಂದಿನ ಪರಿಸ್ಥಿತಿಯನ್ನು ಅವಲಂಬಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು ಶೇಕಡಾ 15ರಷ್ಟು ಹೆಚ್ಚಿಸಲಾಗಿತ್ತು. ನಂತರ ಪ್ರತಿವರ್ಷ ದರ ಪರಿಷ್ಕರಣೆ ಮಾಡುವ ಕುರಿತು ಚರ್ಚೆಗಳು ನಡೆದಿದ್ದವು. ಜಲಮಂಡಳಿ, ವಿದ್ಯುತ್ ದರ ಹಾಗೂ ಮೆಟ್ರೋ ಮಾದರಿಯಲ್ಲಿ ಬಸ್ ದರ ನಿಗದಿ ಮಾಡುವ ಯೋಚನೆಯೂ ಸರ್ಕಾರದ ಮುಂದೆ ಇತ್ತು ಎಂಬ ಮಾಹಿತಿ ದೊರೆತಿದೆ.
ದರ ಏರಿಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಸಮಿತಿ ರಚಿಸಿ, ಅದರ ಶಿಫಾರಸು ಆಧಾರದಲ್ಲಿ ದರ ಪರಿಷ್ಕರಣೆ ಮಾಡುವ ಯೋಜನೆ ರೂಪಿಸಲಾಗಿತ್ತು. ಆದರೆ ಇನ್ನೂ ಸಮಿತಿ ರಚನೆಯಾಗದ ಹಿನ್ನೆಲೆ ಸದ್ಯಕ್ಕೆ ದರ ಏರಿಕೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕನಿಷ್ಠ ಮುಂದಿನ ಆರು ತಿಂಗಳುಗಳ ಕಾಲ ಬಸ್ ಪ್ರಯಾಣ ದರ ಹೆಚ್ಚಳದಿಂದ ಪುರುಷ ಪ್ರಯಾಣಿಕರಿಗೆ ನಿರಾಳತೆ ದೊರೆಯಲಿದೆ.
ಸಮಿತಿ ರಚನೆಯಾದ ನಂತರವೇ ದರ ಏರಿಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ರಾಜ್ಯದಲ್ಲಿ ದಿನನಿತ್ಯ ಬಸ್ ಪ್ರಯಾಣ ಮಾಡುವ ಲಕ್ಷಾಂತರ ಪುರುಷ ಪ್ರಯಾಣಿಕರಿಗೆ ಆರ್ಥಿಕ ರಿಲೀಫ್ ಸಿಕ್ಕಂತಾಗಿದೆ. ವಿಶೇಷವಾಗಿ ಕೆಲಸಕ್ಕೆ ತೆರಳುವವರು, ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಸಂತಸದ ಸುದ್ದಿ.
ಸಾರಿಗೆ ಇಲಾಖೆಯ ಮೂಲಗಳ ಪ್ರಕಾರ, ಸಮಿತಿ ವರದಿ ಸಲ್ಲಿಸಿದ ಬಳಿಕವೇ ಮುಂದಿನ ದರ ಪರಿಷ್ಕರಣೆ ಕುರಿತು ಚರ್ಚೆ ನಡೆಯಲಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ 2026ರ ಉಳಿದ ತಿಂಗಳುಗಳಲ್ಲಿ ಬಸ್ ದರ ಏರಿಕೆಯ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.

