ನವದೆಹಲಿ: ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿಯಿಂದ ಪ್ಯಾರಿಸ್ ಅವಳಿ ಒಲಿಂಪಿಕ್ಸ್ ಪದಕ ವಿಜೇತ ಮನು ಭಾಕರ್ ಹೆಸರನ್ನು ಕೈಬಿಡಲಾಗಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ವಿ ರಾಮಸುಬ್ರಮಮ್ ನೇತೃತ್ವದ 12 ಸದಸ್ಯರ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಿತಿಯು ಶೂಟರ್ ಹೆಸರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಶಿಫಾರಸು ಮಾಡಲಿಲ್ಲ ಎಂದು ತಿಳಿದುಬಂದಿದೆ.
ಮನು ಭಾಕರ್ ಅವರು ಪ್ರಶಸ್ತಿಗೆ ಅರ್ಜಿ ಸಲ್ಲಿಸಿಲ್ಲ ಎಂದು ಕ್ರೀಡಾ ಸಚಿವಾಲಯ ಹೇಳಿಕೊಂಡಿದೆ. ಆದರೆ ಮನು ಭಾಕರ್ ಅವರ ತಂದೆ ರಾಮಕೃಷ್ಣ ಅವರು ಗೌರವಕ್ಕಾಗಿ ಅರ್ಜಿ ಸಲ್ಲಿಸಿದರೂ ಸಮಿತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ. ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾ-ಅಥ್ಲೀಟ್ ಪ್ರವೀಣ್ ಕುಮಾರ್ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತವು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಕಿಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿತು.
ಮನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು. ಮಹಿಳೆಯರ 10m ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮತ್ತು ಇನ್ನೊಂದು ಮಿಶ್ರ 10m ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜತೆಗೆ ಮತ್ತೊಂದು ಪದಕ ಜಯಿಸಿದ್ದರು.
ಮನು ಭಾಕರ್ 2020 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಗೆದ್ದಿದ್ದರು. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸದಿದ್ದರೂ ಮೊಹಮ್ಮದ್ ಶಮಿ ಅವರಿಗೆ ಈ ವರ್ಷದ ಆರಂಭದಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮಧ್ಯಪ್ರವೇಶಿಸಿ ಪ್ರಶಸ್ತಿ ನೀಡುವಂತೆ ಮಾಡಿತ್ತು.

