ಬೆಂಗಳೂರು, ಡಿಸೆಂಬರ್ 30, 2025: ಕೋಗಿಲು ಲೇಔಟ್ ಬಡಾವಣೆ ನಿವಾಸಿಗಳಿಗೆ ಮನೆ ಹಂಚಿಕೆ ವಿಚಾರದಲ್ಲಿ ಓಲೈಕೆ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ. ಮಾನವೀಯತೆ ದೃಷ್ಟಿಯಿಂದ ಮಾತ್ರ ಪರಿಹಾರ ನೀಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಈ ಕುರಿತು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮಾನವೀಯತೆ ದೃಷ್ಟಿಯಿಂದ ಮನೆ ನೀಡಲಾಗುತ್ತಿದೆ. ಯಾರೂ ಸರ್ಕಾರಿ ಜಾಗವನ್ನು ಅತಿಕ್ರಮಿಸಬಾರದು. ಅಕ್ರಮ ಒತ್ತುವರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಓಲೈಕೆ ರಾಜಕಾರಣ ಎಂಬ ಆರೋಪಗಳಿಗೆ ಯಾವುದೇ ಅರ್ಥವಿಲ್ಲ” ಎಂದು ಹೇಳಿದರು.
ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡುವ ವಿಚಾರವಾಗಿ ಮುಖ್ಯಮಂತ್ರಿ ಈಗಾಗಲೇ ಸಭೆ ಕರೆದಿದ್ದು, ಅಲ್ಲಿ ಈ ವಿಷಯವನ್ನು ವಿಸ್ತಾರವಾಗಿ ಚರ್ಚಿಸಲಾಗುವುದು. “ಅರ್ಹ ಬಡವರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ” ಎಂದು ಡಿಸಿಎಂ ಭರವಸೆ ನೀಡಿದರು.
ಸರ್ಕಾರವು ಸುಮಾರು 9–10 ವರ್ಷಗಳ ಹಿಂದೆಯೇ ಪ್ರದೇಶವನ್ನು ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗಾಗಿ ಮಂಜೂರು ಮಾಡಿತ್ತು. ಆದರೆ, ಕೆಲವರು ಈ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿ ಗುಡಿಸಲುಗಳನ್ನು ನಿರ್ಮಿಸಿದ್ದರು. ಈ ಕುರಿತು ಹಲವು ಬಾರಿ ನೋಟಿಸ್‌ಗಳನ್ನು ನೀಡಲಾಗಿತ್ತು. ನಂತರ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಅವರು ವಿವರಿಸಿದರು.
ಈ ವಿಷಯದಲ್ಲಿ ಅನಗತ್ಯವಾಗಿ ರಾಜಕೀಯ ಬೆರೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್, “ಕೆಲವರು ಮುಂಬರುವ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಅಲ್ಪಸಂಖ್ಯಾತರ ಓಲೈಕೆಗೆ ಸುಳ್ಳು ಸಹಾನುಭೂತಿ ತೋರುತ್ತಿದ್ದಾರೆ. ಕೇರಳದ ಮುಖ್ಯಮಂತ್ರಿ ಸೇರಿದಂತೆ ಕಮ್ಯುನಿಸ್ಟ್ ಪಕ್ಷದ ನಾಯಕರು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ” ಎಂದು ಕಿಡಿಕಾರಿದರು.

