ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಕುರಿತು ಅಶ್ಲೀಲ ಪದ ಬಳಕೆ ಪ್ರಕರಣದಲ್ಲಿ ಬಂಧನವಾಗಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಿ.ಟಿ. ರವಿಯವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಸಿಟಿ ರವಿ ವಿರುದ್ಧದ ಎಫ್ಐಆರ್ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತಕ್ಷಣ ಬಿಡುಗಡೆಗೆ ಮಧ್ಯಂತರ ಆದೇಶ ಹೊರಡಿಸಿದೆ. ಆದರೆ, ತನಿಖೆಗೆ ಸಹಕರಿಸಬೇಕೆಂದು ಷರತ್ತು ವಿಧಿಸಿದೆ. ಇನ್ನು ಜಾಮೀನಿಗಾಗಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಡಿಸೆಂಬರ್ 21ಕ್ಕೆ ಮುಂಡೂಡಿತ್ತು. ಆದರೆ ಇದೀಗ ಹೈಕೋರ್ಟ್ನಲ್ಲಿ ಬಿಜೆಪಿ ನಾಯಕನಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಸತ್ಯಕ್ಕೆ ಜಯ ಸಿಕ್ಕಿದೆ. ನಾನು ಆ ರೀತಿ ಮಾತನಾಡಿರುವ ಆಡಿಯೊ ಅಥವಾ ವಿಡಿಯೊ ಲಭ್ಯವಾಗಿಲ್ಲ ಎಂದು ಸಭಾಪತಿಗಳೇ ಹೇಳಿದ್ದಾರೆ. ಅವರು ಹೇಳಿದ ಮೇಲೂ ಬೇರೆ ಬೇರೆ ರೀತಿ ಆರೋಪ ಹೊರಿಸಿ, ಕೇಸ್ ಹಾಕಿದ್ದಾರೆ. ನೆನ್ನೆ ರಾತ್ರಿ ನನ್ನನ್ನು ಟೆರರಿಸ್ಟ್ ತರಹ ನಡೆಸಿಕೊಂಡಿದ್ದಾರೆ. ಕಾನೂನು ಎಲ್ಲರಿಗೂ ಸಮಾನ. ಆದರೆ, ನನ್ನ ದೂರು ಪಡೆಯಲು ನಿರಾಕರಿಸಿದ್ದಾರೆ. ಹೆಬ್ಬಾಳ್ಕರ್ ಕಡೆಯವರು ನೀಡಿದ ದೂರು ಆಧರಿಸಿ ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ಸಿ.ಟಿ.ರವಿ ಕಿಡಿಕಾರಿದ್ದಾರೆ.
ಸಿಟಿ ರವಿ ವಕೀಲರ ವಾದವೇನು..?
ಆರೋಪಿ, ದೂರುದಾರರು ಇಬ್ಬರೂ ಶಾಸಕರಾಗಿದ್ದು, ವಿಧಾನ ಪರಿಷತ್‌ನಲ್ಲಿ ಈ ರೀತಿಯ ಘಟನೆ ನಡೆದಿರುವುದು ದುರದೃಷ್ಟಕರ. ಈ ಪ್ರಕರಣದಲ್ಲಿ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯಿದೆ, 41 ಎ ಅಡಿ ನೋಟಿಸ್ ನೀಡಿ, ಬಂಧನಕ್ಕೆ ಪೊಲೀಸರು ಕಾರಣ ನೀಡಬೇಕಿತ್ತು. ಆದರೆ ಇದನ್ನು ನೀಡಿರುವ ಬಗ್ಗೆ ದಾಖಲೆಗಳನ್ನು ಒದಗಿಸಿಲ್ಲ. ಪೊಲೀಸರು ಹಲ್ಲೆ ನಡೆಸಿದ್ದರಿಂದ ಗಾಯಗಳಾಗಿವೆ ಎಂದು ಸಿಟಿ ರವಿ ವಕೀಲರು ವಾದಿಸಿದ್ದಾರೆ. ಚಿಕಿತ್ಸೆಯ ವಿವರವನ್ನು ವೈದ್ಯಾಧಿಕಾರಿ ಸರಿಯಾಗಿ ನಮೂದಿಸಿಲ್ಲ. ಆದರೆ ಸ್ಕ್ಯಾನಿಂಗ್ ಮಾಡಿಸಿರುವುದಾಗಿ ವರದಿಯಿದೆ. ಘಟನೆಯ ಬಗ್ಗೆ ಏನನ್ನೂ ರೆಕಾರ್ಡ್ ಮಾಡಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಆರೋಪಿ ಸಿಟಿ ರವಿಯನ್ನು ಬಂಧಿಸಲು ಹಲ್ಲೆ ನಡೆಸುವ ಅಗತ್ಯವಿರಲಿಲ್ಲ. ಕಾನೂನು ಕ್ರಮ ಪಾಲಿಸಿ ಕ್ರಮ ಕೈಗೊಳ್ಳಬಹುದಿತ್ತು. ವಿಧಾನಪರಿಷತ್ ಪ್ರತಿಪಕ್ಷದ ಶಾಸಕರಾಗಿದ್ದಾರೆ. ಹೀಗಾಗಿ ಪರಾರಿಯಾಗುವ ಸಾಧ್ಯತೆ ಇಲ್ಲ. ಇದರಿಂದ ತಕ್ಷಣ ಬಿಡುಗಡೆಗೆ ಕೋರ್ಟ್ ಆದೇಶಿಸಿದೆ.
ಕೇಸ್ ಬೆಂಗಳೂರಿಗೆ ಶಿಫ್ಟ್ :
ಮತ್ತೊಂದೆಡೆ ಬೆಳಗಾವಿ ಕೋರ್ಟ್, ಸಿಟಿ ರವಿ ಅವರನ್ಜು ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹೌದು, ಸಚಿವೆ ಲಕ್ಷ್ಮಿ ಹೆಬ್ಬಾಳಕರ್ (Lakshmi hebbalkar) ಅವರಿಗೆ ನಿಂದನೆ ಪ್ರಕರಣದಲ್ಲಿ ಬಂಧಿಸಲಾಗಿದ್ದ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ (C.T.Ravi) ಕೇಸನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ.
ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಶುಕ್ರವಾರ (ಡಿ.20) ಬೆಳಗ್ಗೆ ಐದನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಸಿ.ಟಿ ರವಿ ಅವರ ಹೇಳಿಕೆ ಪಡೆದುಕೊಂಡು ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದ್ದರು. ಇದೀಗ ಬೆಂಗಳೂರು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಬೆಳಗಾವಿ ಜೆ.ಎಂ.ಎಫ್.ಸಿ ನ್ಯಾಯಾಲಯ ಹೇಳಿತು. ತಕ್ಷಣವೇ ಸಿ.ಟಿ.ರವಿ ಅವರನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲು ಕೋರ್ಟ್ ಆದೇಶಿಸಿದೆ.

