ಬೀದರ್: ಗಣಿನಾಡು ಬಳ್ಳಾರಿಯನ್ನೇ ಮೀರಿಸುವ ಮಟ್ಟಿಗೆ ಬೀದರ್ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಬಹಿರಂಗವಾಗಿದೆ. ಜಿಲ್ಲೆಯ ಹೊನ್ನಿಕೇರಿ ಪ್ರದೇಶದಲ್ಲಿ 15ರಿಂದ 20 ಎಕರೆ ಪಟ್ಟಾ ಜಾಗದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ರಾಜಾರೋಷವಾಗಿ ಕಲ್ಲು ಹಾಗೂ ಮಣ್ಣಿನ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಾಗದಲ್ಲೇ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಪರಿಸರಕ್ಕೆ ಭಾರೀ ಹಾನಿ ಉಂಟಾಗುತ್ತಿದೆ. ಸುಮಾರು 50 ಅಡಿ ಆಳವರೆಗೆ ಭೂಮಿಯನ್ನು ಅಗೆದು ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದ್ದು, ಬೃಹತ್ ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳ ಮೂಲಕ ಭೂಮಿ ತೋಡಲಾಗುತ್ತಿದೆ. ಲಾರಿ ಹಾಗೂ ಟಿಪ್ಪರ್‌ಗಳ ಮೂಲಕ ಕಲ್ಲು ಮತ್ತು ಕೆಂಪು ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ.
ಪವರ್ ಟಿವಿಯಲ್ಲಿ ಈ ಅಕ್ರಮ ಗಣಿಗಾರಿಕೆಯ ಎಕ್ಸ್‌ಕ್ಲೂಸಿವ್ ದೃಶ್ಯಗಳು ಪ್ರಸಾರವಾಗಿದ್ದು, ದಂಧೆಕೋರರು ಹಾಡಹಗಲೇ ಭೂಸಂಪತ್ತನ್ನು ಲೂಟಿ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕೆಂಪು ಕಲ್ಲು ಮಾತ್ರವಲ್ಲದೆ ಕೆಂಪು ಮಣ್ಣನ್ನೂ ಅಕ್ರಮವಾಗಿ ನೆರೆ ರಾಜ್ಯಗಳಿಗೆ ಸಾಗಾಟ ಮಾಡಿ ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿರುವ ಆರೋಪವೂ ಕೇಳಿಬಂದಿದೆ.
ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ಬೀದರ್ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಕ್ರಮ ಗಣಿಗಾರಿಕೆಗೆ ಗಣಿ ಇಲಾಖೆ ಅಧಿಕಾರಿಗಳೇ ಸಾಥ್ ನೀಡುತ್ತಿದಾರಾ ಎಂಬ ಶಂಕೆ ಸಹ ವ್ಯಕ್ತವಾಗಿದೆ.
ಈ ಗಂಭೀರ ಪ್ರಕರಣದತ್ತ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಕ್ಷಣ ಗಮನ ಹರಿಸಿ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

