ಬಳ್ಳಾರಿ : ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ಕಿತ್ತೂರು ಕರ್ನಾಟಕದ 2 ಹಾಗೂ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿತ್ತು. ಅದರ ಅನ್ವಯ 2026ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಚೇರಿಗಳ ಸಮಯವನ್ನು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ನಿಗದಿ ಮಾಡಲಾಗಿದೆ.
ಆದರೆ, ಈ ಆದೇಶ ಜಾರಿಯಾಗಿದ್ದರೂ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. ಇಂದು ಬಳ್ಳಾರಿಯ ಹಲವು ಸರ್ಕಾರಿ ಕಚೇರಿಗಳಲ್ಲಿ ಬೆಳಿಗ್ಗೆ 8.30 ಆದರೂ ಕಚೇರಿಗಳು ಖಾಲಿ ಖಾಲಿಯಾಗಿ ಕಂಡುಬಂದವು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಚೇರಿಗಳಿಗೆ ಹಾಜರಾಗದೆ ಇರುವ ದೃಶ್ಯ ಸಾಮಾನ್ಯವಾಗಿತ್ತು.
ಕೆಲವೇ ಕೆಲವರು ಮಾತ್ರ ಕಚೇರಿಗೆ ಆಗಮಿಸಿದ್ದರಿಂದ ಸಾರ್ವಜನಿಕರು ಕೆಲಸಗಳಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕ ಅನುಕೂಲಕ್ಕಾಗಿ ಸರ್ಕಾರ ಸಮಯ ಬದಲಾವಣೆ ಮಾಡಿದರೂ, ಅದನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.

