ಬೆಂಗಳೂರು ಗ್ರಾಮಾಂತರ: 25 ವರ್ಷಗಳ ಬಳಿಕ ತಮ್ಮ ನೆಚ್ಚಿನ ಗುರುಗಳನ್ನು ಭೇಟಿಯಾದ ಹಳೆ ವಿದ್ಯಾರ್ಥಿಗಳು ಪಾದಪೂಜೆ ಮಾಡಿ ಗೌರವ ಸಲ್ಲಿಸಿದ ಮನಮುಟ್ಟುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯಲ್ಲಿ ನಡೆದಿದೆ.
ತೂಬಗೆರೆಯ ಸರ್ಕಾರಿ ಪ್ರೌಢಶಾಲೆಯ 2001–02ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಸೇರಿ ತಮ್ಮ ಗುರುಗಳಿಗೆ ಪಾದಪೂಜೆ ಸಲ್ಲಿಸಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದೇ ವೇಳೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯವಾದ ಶಾಲಾ ಪರಿಕರಗಳನ್ನೂ ವಿತರಿಸಿದರು.
ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮನ್ನು ಶಿಕ್ಷಣದ ಬೆಳಕಿಗೆ ತಂದ ಗುರುಗಳನ್ನು ಸ್ಮರಿಸಿದರು. ವಿದ್ಯಾರ್ಥಿಗಳು ಗುರುಗಳಿಗೆ ಪಾದಪೂಜೆ ಮಾಡಿ ಗೌರವ ನಮನ ಸಲ್ಲಿಸಿ ಆಶೀರ್ವಾದ ಪಡೆದರು.
ಈ ಸಂದರ್ಭ ಶಿಕ್ಷಕರು ಹಳೆಯ ವಿದ್ಯಾರ್ಥಿಗಳನ್ನು ನೋಡಿದ ಸಂತೋಷವನ್ನು ಹಂಚಿಕೊಂಡು, ಅವರ ಸಾಧನೆಗೆ ಹಾರೈಸಿದರು. ಕಾರ್ಯಕ್ರಮವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಗುರು–ಶಿಷ್ಯರ ಬಾಂಧವ್ಯವನ್ನು ಮತ್ತೊಮ್ಮೆ ನೆನಪಿಸಿತು.

