ನವದೆಹಲಿ : ಒಂದು ದೇಶ ಒಂದು ಚುನಾವಣಾ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಲೋಕಸಭೆ ಅಧಿವೇಶನದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಮಂಡಿಸಿದರು. ಇದರೊಂದಿಗೆ ಸಾರ್ವತ್ರಿಕ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ ಮಾಡಿದ ಭರವಸೆಯನ್ನು ಜಾರಿಗೊಳಿಸುವಲ್ಲಿ ನಿರ್ಣಾಯಕ ಹೆಜ್ಜೆ ಇಟ್ಟಿದೆ.ಮಸೂದೆಗೆ ಕಾಂಗ್ರೆಸ್, ಟಿಎಂಸಿ, ಎಸ್ಪಿ ಸೇರಿದಂತೆ ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಇಂದು ಲೋಕಸಭೆಯಲ್ಲಿ ಸಂವಿಧಾನ (ನೂರ ಇಪ್ಪತ್ತೊಂದನೇಯ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆಯನ್ನುಮಂಡಿಸಿದರು. ಮಸೂದೆ ಮಂಡನೆಯ ಬೆನ್ನಲ್ಲೇ ಇಂಡಿ ಒಕ್ಕೂಟದ ಸದಸ್ಯರು ಭಾರಿ ವಿರೋಧ ವ್ಯಕ್ತಪಡಿಸಿದರು. ಸಂಸದ ಮನೀಶ್ ತಿವಾರಿ, ಕೇಂದ್ರ ಮತ್ತು ರಾಜ್ಯದ ಅವಧಿಯನ್ನು ಹೇಗೆ ಏಕಕಾಲದಲ್ಲಿ ಮಾಡಲು ಸಾಧ್ಯ? ಭಾರತ ಒಕ್ಕೂಟ ದೇಶ, ಕೇಂದ್ರೀಕರಣ ಮಾಡುವುದು ಸರಿಯಲ್ಲ. ಇದು ಸಂವಿಧಾನ ವಿರೋಧಿ ತಿದ್ದುಪಡಿ ಎಂದು ಕಿಡಿಕಾರಿದರು.
ಎಲ್ಲ ರಾಜ್ಯಗಳು ವಿಭಿನ್ನ ವೈವಿಧ್ಯತೆ ಹೊಂದಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಒಕ್ಕೂಟ ವ್ಯವಸ್ಥೆ ಮಾಡಿದರು. ಎಂಟು ವಿಧಾನಸಭೆ ಕ್ಷೇತ್ರಗಳ ವಿಧಾನಸಭೆ ಚುನಾವಣೆಯನ್ನು ಒಟ್ಟಿಗೆ ಮಾಡಲು ಸಾಧ್ಯವಾಗಲಿಲ್ಲ. ನಾಲ್ಕು ರಾಜ್ಯಗಳ ಚುನಾವಣೆ ಒಟ್ಟಿಗೆ ಮಾಡಲು ಸಾಧ್ಯವಾಗಲಿಲ್ಲ. ಈಗ ಇಡೀ ದೇಶದಲ್ಲಿ ಒಟ್ಟಿಗೆ ಚುನಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದೀರಿ ಎಂದು ಎಂದು ಎಸ್‌ಪಿ ಸಂಸದ ಧರ್ಮೇಂದ್ರ ಯಾದವ್ ವಿರೋಧ ವ್ಯಕ್ತಪಡಿಸಿದರು. ಮಸೂದೆ ಮಂಡನೆಯ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಕಾಂಗ್ರೆಸ್, ಟಿಡಿಪಿ ಸೇರಿದಂತೆ ಎನ್‌ಡಿಎ ಮಿತ್ರ ಪಕ್ಷಗಳು ಸದಸ್ಯರಿಗೆ ವಿಪ್ ಜಾರಿ ಮಾಡಿದ್ದವು.
ಈ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬುದು ಭಾರತದಲ್ಲಿ ಹೊಸ ಪರಿಕಲ್ಪನೆಯಲ್ಲ. 1950ರಲ್ಲಿ ಸಂವಿಧಾನದ ಅಂಗೀಕಾರದ ನಂತರ, 1951ರಿಂದ 1967ರ ನಡುವೆ ಪ್ರತಿ 5 ವರ್ಷಗಳಿಗೊಮ್ಮೆ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ಅಸೆಂಬ್ಲಿಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲಾಗಿತ್ತು.
1952, 1957, 1962 ಮತ್ತು 1967ರಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆದವು. ಹೊಸ ರಾಜ್ಯಗಳು ರಚನೆಯಾಗಲು ಪ್ರಾರಂಭಿಸಿದಾಗ ಈ ಪದ್ಧತಿ ಕೊನೆಗೊಂಡಿತು. 1968-1969ರಲ್ಲಿ ವಿವಿಧ ಶಾಸಕಾಂಗ ಸಭೆಗಳ ವಿಸರ್ಜನೆಯ ನಂತರ ಈ ಪದ್ಧತಿಯನ್ನು ಸಂಪೂರ್ಣವಾಗಿ ಕೈಬಿಡಲಾಯಿತು.

