ಟೆಹ್ರಾನ್, ಮಾ. 26: ವಿಶ್ವದ ಪ್ರಮುಖ ತೈಲ ಸಾಗಾಣಿಕೆಯ ದಾರಿಯಾದ ಹಾರ್ಮುಜ್ ಜಲಸಂಧಿಯನ್ನು ಮಿತ್ರ ರಾಷ್ಟ್ರಗಳ ಹಡಗುಗಳಿಗೆ ತೆರೆಯಲಾಗಿದೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ತಿಳಿಸಿದ್ದಾರೆ.
ಚೀನಾ, ರಷ್ಯಾ, ಭಾರತ, ಇರಾಕ್ ಹಾಗೂ ಪಾಕಿಸ್ತಾನ ಸೇರಿದಂತೆ ಮಿತ್ರ ರಾಷ್ಟ್ರಗಳಿಗೆ ಯಾವುದೇ ನಿರ್ಬಂಧವಿಲ್ಲದೆ ಈ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.
ಇಸ್ರೇಲ್ ಮತ್ತು ಅಮೆರಿಕ ವಿರುದ್ಧದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ ಈ ಹಿಂದೆ ಜಲಸಂಧಿಯನ್ನು ಮುಚ್ಚಿದ್ದ ಇರಾನ್, ಅಮೆರಿಕ ಘೋಷಿಸಿದ ಒಂದು ತಿಂಗಳ ಯುದ್ಧ ವಿರಾಮದ ಬಳಿಕ ಇದೀಗ ಮಿತ್ರ ರಾಷ್ಟ್ರಗಳಿಗೆ ಮಾರ್ಗವನ್ನು ತೆರೆಯುವ ನಿರ್ಧಾರ ಕೈಗೊಂಡಿದೆ. ಆದರೆ ಶತ್ರು ರಾಷ್ಟ್ರಗಳ ಹಡಗುಗಳಿಗೆ ಹಾರ್ಮುಜ್ ಜಲಸಂಧಿ ಮೂಲಕ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಅರಘ್ಚಿ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಈ ಕ್ರಮದಿಂದ ಜಾಗತಿಕ ತೈಲ ಸಾಗಣೆ ಸುಗಮವಾಗುವ ಸಾಧ್ಯತೆ ಇದ್ದು, ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯ ಮೇಲೂ ಧನಾತ್ಮಕ ಪರಿಣಾಮ ಬೀರುವ ನಿರೀಕ್ಷೆ ವ್ಯಕ್ತವಾಗಿದೆ.

