ಕರಾಚಿ : ಭಾರತದ ಮಿಲಿಟರಿ ಕಾರ್ಯಾಚರಣೆ ಭಯ ಪಾಕಿಸ್ತಾನಕ್ಕೆ ಭಯ ಹುಟ್ಟಿಸಿದ್ದು ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಮಧ್ಯರಾತ್ರಿ ಸುದ್ದಿಗೋಷ್ಠಿ ನಡೆಸಿ ಭಾರತ 24 ರಿಂದ 36 ಗಂಟೆಗಳ ಒಳಗೆ ಯಾವುದೇ ಕ್ರಮ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾನೆ.
ಮೋದಿ ಅವರು ನಡೆಸಿದ ನಿರ್ಣಾಯಕ ಸಭೆಯ ನಂತರ ಪಾಕಿಸ್ತಾನವು ಹೆಚ್ಚಿನ ಎಚ್ಚರಿಕೆಯಲ್ಲಿರುವಂತೆ ತೋರುತ್ತಿದೆ. ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತವು 36 ಗಂಟೆಗಳ ಒಳಗೆ ಪಾಕಿಸ್ತಾನದ ವಿರುದ್ಧ ಮಿಲಿಟರಿ ಕ್ರಮಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ವಿಶ್ವಾಸಾರ್ಹ ಗುಪ್ತಚರ ಮಾಹಿತಿ ತಿಳಿಸಿದೆ. ಭಾರತೀಯ ಸೇನೆಯು 24 ರಿಂದ 36 ಗಂಟೆಗಳ ಒಳಗೆ ಯಾವುದೇ ಕ್ರಮ ತೆಗೆದುಕೊಳ್ಳಬಹುದು. ಭಾರತ ಏನಾದರೂ ಅಂತಹ ಕ್ರಮ ಕೈಗೊಂಡರೆ, ಪಾಕಿಸ್ತಾನ ಕೂಡ ಅದನ್ನು ಎದುರಿಸಲು ಸಿದ್ಧವಾಗಿದೆ ಎಂದು ಹೇಳಿದರು.
ಭಾರತದ ಯಾವುದೇ ಆಕ್ರಮಣಕಾರಿ ನಡೆಗೆ ನಿರ್ಣಾಯಕ ಪ್ರತಿಕ್ರಿಯೆ ನೀಡಲಾಗುವುದು. ಈ ಪ್ರದೇಶದಲ್ಲಿ ಯಾವುದೇ ಗಂಭೀರ ಪರಿಣಾಮಗಳಿಗೆ ಭಾರತವೇ ಸಂಪೂರ್ಣ ಹೊಣೆಗಾರನಾಗಿರುತ್ತದೆ. ಪಾಕಿಸ್ತಾನವು ಭಯೋತ್ಪಾದನೆಯ ಬಲಿಪಶುವಾಗಿದೆ ಮತ್ತು ಈ ಪಿಡುಗಿನ ನೋವನ್ನು ನಿಜವಾಗಿಯೂ ಅರ್ಥಮಾಡಿಕೊಂಡಿದೆ. ಪ್ರಪಂಚದ ಎಲ್ಲೆಡೆ, ಅದರ ಎಲ್ಲ ರೂಪಗಳನ್ನು ನಾವು ಯಾವಾಗಲೂ ಖಂಡಿಸುತ್ತೇವೆ ಎಂದು ತರಾರ್ ಹೇಳಿದರು.
ಭಾರತ ಪಾರದರ್ಶಕ ಮತ್ತು ಸ್ವತಂತ್ರ ತನಿಖೆಗೆ ಏಕೆ ಮುಂದೆ ಬರುತ್ತಿಲ್ಲ? ಪಾಕಿಸ್ತಾನ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ದೃಢವಾಗಿ ದೃಢನಿಶ್ಚಯ ಹೊಂದಿದೆ ಎಂದ ತರಾರ್, ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನಿಸುವಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಪಡೆಗಳಿಗೆ ಮೋದಿ ಸಂಪೂರ್ಣ ಸ್ವಾತಂತ್ರ್ಯ :
ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಸೇನಾ ಪಡೆಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಏನು ಮಾಡಬೇಕೆಂದು ಚರ್ಚಿಸಿದರು. ಅಲ್ಲದೆ, ಸೇನಾ ಪಡೆಗಳಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಿದರು.
ಗುಟೆರೆಸ್ ಫೋನ್ ಕಾಲ್ :
ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಪ್ರತಿಕ್ರಿಯಿಸಿದ್ದಾರೆ. ಎರಡೂ ದೇಶಗಳ ಮುಖ್ಯಸ್ಥರಿಗೆ ಕರೆ ಮಾಡಿ ಮಾತನಾಡಿದ್ದಾರೆ. ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಉದ್ವಿಗ್ನತೆಯನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದರು. ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಅವರು ಮನವಿ ಮಾಡಿದರು.
ಈಗಾಗಲೇ ಅನೇಕ ಕ್ರಮ ಕೈಗೊಂಡ ಭಾರತ :
ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡರು. ಅಲ್ಲದೆ, ಹಲವರು ಗಾಯಗೊಂಡರು. ಅದಾದ ನಂತರ, ಭಾರತ, ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸಿಂಧೂ ಜಲ ಒಪ್ಪಂದಕ್ಕೆ ಬ್ರೇಕ್ ಹಾಕಿದೆ. ಪಾಕಿಸ್ತಾನ ವೀಸಾಗಳನ್ನು ಸಹ ರದ್ದುಗೊಳಿಸಿದೆ. ಅಟ್ಟಾರಿ ಗಡಿಯನ್ನು ಮುಚ್ಚಿದೆ. ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ಸಹ ನಿರ್ಬಂಧಿಸಿದೆ. ಭಾರತ ಒಂದೊಂದಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದರ ನಡುವೆ ಉಭಯ ದೇಶಗಳ ನಡುವೆ ಯುದ್ಧದ ಭೀತಿಯು ಹೆಚ್ಚಾಗುತ್ತಿದೆ.

