ನವದೆಹಲಿ: ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಆಡಳಿತಾರೂಡ ಎನ್‌ಡಿಎ ಮೈತ್ರಿಕೂಟ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಅಧಿವೇಶನದಲ್ಲಿ ಒಟ್ಟು 16 ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇವುಗಳ ಪೈಕಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ಖಚಿತವಾಗಿದೆ. ಇನ್ನೂ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಹೊಸ ಮಸೂದೆಗಳನ್ನ ಮಂಡಿಸಲು ಸಜ್ಜಾಗಿದೆ. ಅದರಲ್ಲೂ ಅತಿಮುಖ್ಯವಾಗಿ ವಕ್ಫ್ ಕಾಯಿದೆ ತಿದ್ದುಪಡಿ ಮಸೂದೆ ಪ್ರಮುಖವಾಗಿದೆ.
ಈ ನಡುವೆ ಸುಗಮ ಕಲಾಪದ ನಿಟ್ಟಿನಲ್ಲಿ ವಿಪಕ್ಷಗಳ ಸಹಕಾರ ಕೋರಲು ಸರ್ಕಾರ ಭಾನುವಾರ ಸರ್ವಪಕ್ಷಗಳ ಸಭೆ ಆಯೋಜಿಸಿತ್ತು. ಈ ವೇಳೆ ವಿಪಕ್ಷಗಳು, ಅಧಿವೇಶನದ ಅವಧಿಯಲ್ಲಿ ಅದಾನಿ ಹಗರಣದ ಕುರಿತು ತನಿಖೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿವೆ. ಇದರ ಜೊತೆಗೆ ಇತ್ತೀಚಿನ ಮಣಿಪುರ ಗಲಭೆ ವಿಷಯ, ಆಹಾರ ಧಾನ್ಯಗಳ ಬೆಲೆ ಏರಿಕೆ ಮತ್ತಿತರೆ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಈ ಮೂಲಕ ಮುಂದಿನ ಅಧಿವೇಶನ ಯಾವ ರೀತಿಯಲ್ಲಿ ಸಾಗಬಹುದು ಎನ್ನುವ ಕುರಿತು ಸುಳಿವು ನೀಡಿದಂತಾಗಿದ್ದು, ಮೊದಲ ದಿನದಿಂದಲೇ ಕಲಾಪಗಳು ಕಾವೇರುವ ನಿರೀಕ್ಷೆಯಿದೆ.
ಭಾರತದ ನಂ.1 ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರು ತಮ್ಮ ಕಂಪನಿ ಉತ್ಪಾದಿಸಿದ ಸೌರ ವಿದ್ಯುತ್ ಮಾರಾಟಕ್ಕೆ ಕೆಲ ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ 2,100 ಕೋಟಿ ರೂ. ಲಂಚ ನೀಡಿದ್ದರು ಎಂದು ಅಮೆರಿಕದಲ್ಲಿ ದೋಷಾರೋಪ ಹೊರಿಸಲಾಗಿದೆ. ಹೀಗಾಗಿ ಅದಾನಿಗೆ ಪ್ರಧಾನಿ ನರೇಂದ್ರ ಮೋದಿಯವರು ಶ್ರೀರಕ್ಷೆಯಾಗಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳು ಗದ್ದಲ ಎಬ್ಬಿಸುವ ಸಂಭವವಿದೆ.
ಜೊತೆಗೆ ಸರ್ಕಾರದ ಇನ್ನೊಂದು ಪ್ರಮುಖ ಯೋಜನೆಯಾಗಿರುವ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ ಬಗ್ಗೆ ಸರ್ಕಾರ ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ ಅದನ್ನು ಕೂಡ ಯಾವುದೇ ಹಂತದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಡಿ.20ರ ವರೆಗೆ ಕಲಾಪ ನಡೆಯಲಿದೆ.

