ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಎ1 ಆರೋಪಿ ಪವಿತ್ರಾ ಗೌಡ ಆರು ತಿಂಗಳ ಬಳಿಕ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ. 6 ತಿಂಗಳ ಹಿಂದೆ ಜೈಲು ಸೇರಿದ್ದ ದರ್ಶನ್ ಗೆಳತಿ ಪವಿತ್ರಾ ಗೌಡ ಮತ್ತು ಇತರರಿಗೆ ಶುಕ್ರವಾರ ಹೈಕೋರ್ಟ್‌ನ ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿತ್ತು. ಸೋಮವಾರ ಜಾಮೀನು ಪ್ರಕ್ರಿಯೆಗಳು ಎಲ್ಲಾ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು(ಡಿ.17) ಬೆಳಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪವಿತ್ರಾ ಗೌಡ ಜೊತೆ 14ನೇ ಆರೋಪಿ ಪ್ರದೂಶ್ ಬಿಡುಗಡೆಯಾಗಿದ್ದಾನೆ.
ಹೈಕೋರ್ಟ್ನಿಂದ ಬೇಲ್ ಸಿಕ್ಕಿ 4 ದಿನ ಕಳೆದರೂ ಪವಿತ್ರಾಗೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಆದರೆ ಇಂದು ಬೆಳಗ್ಗೆ ಬಿಡುಗಡೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬೆನ್ನಲ್ಲೇ ಪವಿತ್ರಾಗೌಡ ಜೈಲಿನಿಂದ ರಿಲೀಸ್ ಆಗಿದ್ದಾರೆ. ಎಲ್ಲಾ ಆರೋಪಿಗಳು ತಲಾ 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು ಸೇರಿದಂತೆ ಹಲವು ಷರತ್ತುಗಳನ್ನು ಕೋರ್ಟ್ ವಿಧಿಸಿದೆ
ಜೈಲಿನಿಂದ ಹೊರ ಬಂದ ಬಳಿಕ ತಮ್ಮ ತಾಯಿಯವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಇದಕ್ಕೂ ಮೊದಲು ಅವರ ತಾಯಿ ಜೈಲಿನ ಬಳಿ ಇರುವ ಮುನೇಶ್ವರ ದೇವಾಲಯದಲ್ಲಿ ಅವಸರಲ್ಲಿಯೇ ಪೂಜೆ ಸಲ್ಲಿಸಿದರು. ದೇವರಿಗೆ ಹೂವಿನ ಹಾರ, ನಿಂಬೆಹಣ್ಣಿನ ಹಾರ ಹಾಕಿ, ಆಗರಬತ್ತಿ ಬೆಳಗಿ ನಮಸ್ಕಾರ ಮಾಡಿದರು. ಮುನೇಶ್ವರನಿಗೆ ಪೂಜೆ ಮಾಡಿದ ಬಳಿಕ ತಾಯಿ ಬಳಿಗೆ ಬಂದು ಪವಿತ್ರಾ ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್, ಪವಿತ್ರಗೌಡ ಸೇರಿದಂತೆ 17 ಆರೋಪಿಗಳು ಜೈಲು ಸೇರಿದ್ದರು. ಬಳಿಕ ಜೈಲಿನಲ್ಲಿ ಕೆಲ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲವರನ್ನು ಉಳಿಸಿ ಇನ್ನು ಕೆಲವರನ್ನು ರಾಜ್ಯದ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತ ಮಾಡಲಾಗಿತ್ತು. ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಕಳುಹಿಸಲಾಗಿತ್ತು. ಕೆಲ ತಿಂಗಳುಗಳ ಬಳಿಕ ವೈದ್ಯಕೀಯ ಜಾಮೀನು ಪಡೆದು ದರ್ಶನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಈಗ ದರ್ಶನ್ ಅವರಿಗೆ ಪೂರ್ಣವಧಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇನ್ನು ಪವಿತ್ರಾ ಗೌಡ ಇಂದು ರಿಲೀಸ್ ಆಗಿದ್ದಾರೆ. ಪವಿತ್ರಾ ಗೌಡ ಜೂನ್ 11 ರಂದು ಪೊಲೀಸರು ಬಂಧಿಸಿದ್ದರು. ನಂತರ ಕೋರ್ಟ್ ಆದೇಶದಂತೆ ಜೂನ್ 20 ರಂದು ಜೈಲು ಸೇರಿದ್ದರು. ಅಲ್ಲಿಂದ ಇಲ್ಲಿವರೆಗೂ ಬರೋಬ್ಬರಿ 6 ತಿಂಗಳ ಬಳಿಕ ಪವಿತ್ರಾ ಗೌಡ ಜೈಲಿನಿಂದ ಬಿಡುಗಡೆ ಆಗುತ್ತಿದ್ದಾರೆ.