ಕೋಲಾರ : ಬೆಂಗಳೂರು-ತಿರುಪತಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್ 75ರ ಕಾಮಗಾರಿ ಮುಳುಬಾಗಿಲು ತಾಲೂಕಿನ ನರಸಿಂಹ ತೀರ್ಥ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿದ್ದು, ಈ ಕುರಿತು ಸುಮಾರು ಒಂದು ವರ್ಷ ಹಿಂದೆಯೇ ಸುದ್ದಿಯಾಗಿದ್ದರೂ ಸಮಸ್ಯೆಗೆ ಇನ್ನೂ ಪರಿಹಾರ ಸಿಗದೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಾಮಗಾರಿಯ ಬಗ್ಗೆ ಎಚ್ಚೆತ್ತುಕೊಳ್ಳದೆ ಎನ್‌ಎಚ್ 75 ಅಧಿಕಾರಿಗಳು, ಸಂಸದರು, ಕೋಲಾರ ಜಿಲ್ಲಾಧಿಕಾರಿಗಳು, ತಾಲೂಕು ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ರೈತ ಸಂಘದ ನಾರಾಯಣಗೌಡ ಕಿಡಿಕಾರಿದರು.
ಮುಖ್ಯ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಪ್ರತಿದಿನ ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ. ವಿಶೇಷವಾಗಿ ಶನಿವಾರ ಹಾಗೂ ಭಾನುವಾರ ದಿನಗಳಲ್ಲಿ ರಸ್ತೆ ಗುಂಡಿಗಳ ಕಾರಣ ವಾಹನಗಳು ಪಲ್ಟಿಯಾಗುವಂತಹ ಅಪಾಯಕಾರಿ ಪರಿಸ್ಥಿತಿ ಉಂಟಾಗಿದೆ. ಸುಮಾರು ಎಂಟು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ರೂ ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ತಿರುಪತಿ, ಚೆನ್ನೈ, ಆಂಧ್ರ ಗಡಿಭಾಗ ಹಾಗೂ ಬೆಂಗಳೂರಿನತ್ತ ಸಾಗುವ ಸಾವಿರಾರು ವಾಹನಗಳು ಪ್ರತಿದಿನ ಇದೇ ರಸ್ತೆಯನ್ನು ಬಳಸುತ್ತಿದ್ದು, ಪ್ರಯಾಣಿಕರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಇದೇ ರಸ್ತೆಯಲ್ಲಿ ರೈತರು, ಕೂಲಿ ಕಾರ್ಮಿಕರು, ಮಕ್ಕಳು ಹಾಗೂ ಶಾಲಾ ವಾಹನಗಳು ಸಂಚರಿಸುತ್ತಿದ್ದು, ಅವರಿಗೂ ಭಾರೀ ತೊಂದರೆ ಉಂಟಾಗಿದೆ. “ಇನ್ನೂ ಎಷ್ಟು ವರ್ಷ ಕಾಯಬೇಕು ಎನ್‌ಎಚ್ 75 ಕಾಮಗಾರಿ ಪೂರ್ಣಗೊಳ್ಳಲು?” ಎಂಬ ಪ್ರಶ್ನೆಯನ್ನು ಜನಸಾಮಾನ್ಯರು ಕೇಳುತ್ತಿದ್ದಾರೆ.
ವರದಿ: ಅರುಣ್ ಕುಮಾರ್
ಸಂಪೂರ್ಣ ನ್ಯೂಸ್, ಕೋಲಾರ

