ಬೆಂಗಳೂರು: ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ಪದೇ ಪದೇ ದುರ್ಘಟನೆಗಳು ಸಂಭವಿಸಿದ ಬೆನ್ನಲ್ಲೇ ಅರಣ್ಯ ಸಚಿವಾಲಯ ಕಠಿಣ ನಿಯಮ ಜಾರಿಗೆ ತಂದಿದೆ.
ಇನ್ನುಮುಂದೆ ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ಸಿನಿಮಾ, ಸಾಕ್ಷ್ಯಚಿತ್ರ ಅಥವಾ ಧಾರಾವಾಹಿಗಳು ಸೇರಿದಂತೆ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯಗೊಳಿಸಲಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಈ ಕುರಿತು ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸಚಿವರು ಸೂಚನೆ ನೀಡಿದ್ದಾರೆ.
ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಚಲನಚಿತ್ರ, ದೂರದರ್ಶನ, ಧಾರವಾಹಿ, ಸಾಕ್ಷ್ಯಚಿತ್ರ ಇತ್ಯಾದಿಗಳನ್ನು ಚಿತ್ರೀಕರಿಸಲು ಶುಲ್ಕ ಪಡೆದು ಅನುಮತಿಸಲಾಗುತ್ತಿದೆ. ಪ್ರಸ್ತುತ ಅರಣ್ಯ ಪ್ರದೇಶದ ಚಿತ್ರೀಕರಣಕ್ಕೆ ಉಪಅರಣ್ಯ ಸಂರಕ್ಷಣಾಧಿಕಾರಿಗಳು ಅನುಮತಿ ನೀಡುತ್ತಿರುವುದು ಸರಿಯಷ್ಟೆ.
ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶ ಚಿತ್ರೀಕರಣದಿಂದ ಆಗಬಹುದಾದ ತೊಂದರೆ ಹಾಗೂ ಇದಕ್ಕೆ ಸಂಬಂಧಿಸಿದ ಅಪರಾಧಗಳ ಗಂಭೀರತೆಯ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಚುರಗೊಂಡಿರುವುದನ್ನು ಗಮನಿಸಲಾಗಿದೆ.
ಇದಲ್ಲದೆ ಅರಣ್ಯ ಪ್ರದೇಶದಲ್ಲಿ ವಿವಿಧ ಬಗೆಯ ಚಿತ್ರೀಕರಣಕ್ಕೆ ಸ್ಥಳೀಯ ಮಟ್ಟದ ಅಧಿಕಾರಿಗಳು ಅನುಮತಿ ನೀಡುತ್ತಿದ್ದು, ಇದರಿಂದ ಅರಣ್ಯ ಪ್ರದೇಶದ ಗೌಪ್ಯ ಮಾಹಿತಿಯು ಹೊರ ಜಗತ್ತಿಗೆ ದೊರೆಯುವ ಸಂಭವವಿರುತ್ತದೆ. ಮುಂದುವರೆದು, ಅರಣ್ಯ ಮತ್ತು ವನ್ಯಜೀವಿಗಳ ಸೂಕ್ಷ್ಮತೆಯ ಅರಿವಿಲ್ಲದರಿಂದ. ಪರಿಸರ ಹಾಗೂ ಜೀವವೈವಿದ್ಯಕ್ಕೆ ಧಕ್ಕೆ ಉಂಟಾಗುವ ಸಂಭವವಿರುತ್ತದೆ, ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಇದೇ ಕಾರಣಕ್ಕೆ ಇದೀಗ ಕಠಿಣ ನಿಯಮ ಜಾರಿಗೆ ತರಲಾಗಿದೆ.

