ಚಿತ್ರದುರ್ಗ: ಶಬರಿಮಲೆಯಲ್ಲಿ ಹಾರಿಬಿಟ್ಟ ಪಾರಿವಾಳವೊಂದು ಸುಮಾರು 900 ಕಿಲೋಮೀಟರ್ ದೂರವನ್ನು ಕ್ರಮಿಸಿ 21 ದಿನಗಳ ಬಳಿಕ ಮರಳಿ ತನ್ನ ಗೂಡಿಗೆ ಸೇರಿರುವ ಅಚ್ಚರಿಯ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತಳವಾರಹಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ನಿವಾಸಿ ರಾಜು ಎಂಬವರು ಸಾಕಿದ್ದ ‘ಮದಕರಿ’ ಎಂಬ ಪಾರಿವಾಳವನ್ನು ಶಬರಿಮಲೆಗೆ ತೆರಳಿದ್ದ ಮಾಲಾಧಾರಿಗೆ ನೀಡಲಾಗಿತ್ತು. ಶಬರಿಮಲೆಯಲ್ಲಿ ಪಾರಿವಾಳವನ್ನು ಹಾರಿಬಿಡುವಂತೆ ಸೂಚನೆಯೂ ನೀಡಲಾಗಿತ್ತು. ಅದರಂತೆ ಡಿಸೆಂಬರ್ 31ರಂದು ಶಬರಿಮಲೆಯಲ್ಲಿ ಪಾರಿವಾಳವನ್ನು ಹಾರಿಬಿಡಲಾಗಿದ್ದು, ಅದು ಜನವರಿ 21ರಂದು ಮರಳಿ ತಳವಾರಹಟ್ಟಿಯಲ್ಲಿರುವ ತನ್ನ ಗೂಡಿಗೆ ಸೇರಿದೆ.
ಸುಮಾರು 900 ಕಿಲೋಮೀಟರ್ ದೂರವನ್ನು ದಾಟಿ 21 ದಿನಗಳ ಬಳಿಕ ಗೂಡಿಗೆ ಮರಳಿರುವ ಈ ಪಾರಿವಾಳದ ದಿಕ್ಕು ಪತ್ತೆ ಸಾಮರ್ಥ್ಯ, ತೀಕ್ಷ್ಣ ದೃಷ್ಟಿ ಹಾಗೂ ಅದ್ಭುತ ನೆನಪಿನ ಶಕ್ತಿ ಗ್ರಾಮಸ್ಥರಲ್ಲಿ ಭಾರೀ ಅಚ್ಚರಿ ಮೂಡಿಸಿದೆ. ಈ ಅಪರೂಪದ ಘಟನೆ ಸ್ಥಳೀಯರಲ್ಲಿ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.

