ಗಾಂಧಿನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಜರಾತ್‌ನ ಹಂಸಲ್‌ಪುರದ ಸುಜುಕಿ ಮೋಟಾರ್ ಉತ್ಪಾದನ ಘಟಕದಲ್ಲಿ ಎರಡು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿದರು. ಮೊದಲನೆಯದಾಗಿ ಮಾರುತಿ ಸುಜುಕಿಯ ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಿದರು.
ಎರಡನೆಯದಾಗಿ, ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್‌ಗಳ ಉತ್ಪಾದನೆಗೆ ಮೊದಲ ಕಾರ್ಖಾನೆಯ ಉದ್ಘಾಟನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಜಪಾನ್ ರಾಯಭಾರಿ ಕೀಚಿ ಒನೊ ಉಪಸ್ಥಿತರಿದ್ದರು.
ಪಿಎಂ ಮೋದಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಈ ಉದ್ಘಾಟನೆಯನ್ನು “ಭಾರತದ ಸ್ವಾವಲಂಬನೆಯ ಯಾತ್ರೆಯಲ್ಲಿ ವಿಶೇಷ ದಿನ” ಎಂದು ಕರೆದಿದ್ದಾರೆ. ಈ ಕಾರ್ಖಾನೆಯಲ್ಲಿ ತಯಾರಾದ ಎಲೆಕ್ಟ್ರಿಕ್ ವಾಹನಗಳು ವಿಶ್ವದ 100 ದೇಶಗಳಿಗೆ ರಫ್ತಾಗಲಿವೆ. ಮೊದಲ ಘಟಕವು ಇಂಗ್ಲೆಂಡ್‌ಗೆ ರವಾನೆಯಾಗಲಿದೆ.
ಇ-ವಿಟಾರಾವನ್ನು ಕಳೆದ ವರ್ಷ ಯುರೋಪ್‌ನಲ್ಲಿ ಮೊದಲು ಪರಿಚಯಿಸಲಾಯಿತು ಮತ್ತು 2025ರ ಭಾರತ್ ಮೊಬಿಲಿಟಿ ಶೋದಲ್ಲಿ ಭಾರತದಲ್ಲಿ ಪ್ರದರ್ಶಿಸಲಾಯಿತು. ಇದನ್ನು ಟೊಯೊಟಾದ ಸಹಯೋಗದೊಂದಿಗೆ 40PL ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್‌ನಲ್ಲಿ ತಯಾರಿಸಲಾಗಿದೆ. ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಟೊಯೊಟಾದ ಅರ್ಬನ್ ಕ್ರೂಸರ್ ಇವಿ ಕೂಡ ತಯಾರಾಗಲಿದೆ.
ಈ ಎಲೆಕ್ಟ್ರಿಕ್ ಎಸ್‌ಯುವಿ 49 ಕಿಲೋವ್ಯಾಟ್ ಮತ್ತು 61 ಕಿಲೋವ್ಯಾಟ್‌ನ ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ. ದೊಡ್ಡ ಬ್ಯಾಟರಿಯು ಡ್ಯುಯಲ್-ಮೋಟರ್ ಆಲ್‌ಗ್ರಿಪ್-ಇ ಆಲ್-ವೀಲ್ ಡ್ರೈವ್ ಆಯ್ಕೆಯನ್ನು ಹೊಂದಿರುತ್ತದೆ. ಭಾರತದಲ್ಲಿ ಇದರ ಆರಂಭಿಕ ಬೆಲೆ ಸುಮಾರು 20 ಲಕ್ಷ ರೂಪಾಯಿಗಳು (ಎಕ್ಸ್-ಶೋರೂಮ್) ಇರಬಹುದು. ಇದು ಮಹೀಂದ್ರಾ BE6, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಎಂಜಿ ಝಡ್‌ಎಸ್ ಇವಿ ಜತೆ ಸ್ಪರ್ಧಿಸಲಿದೆ.

