ನವದೆಹಲಿ: ಜೇವರ್‌ನಲ್ಲಿ ನಿರ್ಮಾಣಗೊಂಡಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಇದು ಉತ್ತರ ಪ್ರದೇಶದ ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಯುವಜನರಿಗೆ ಹೊಸ ಅವಕಾಶಗಳನ್ನು ತೆರೆದಿಡಲಿದೆ ಎಂದು ಹೇಳಿದರು.
ವಿಮಾನ ನಿಲ್ದಾಣದ ಮೊದಲ ಹಂತದ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಪ್ರಾದೇಶಿಕ ಅಭಿವೃದ್ಧಿ ಮತ್ತು ಉತ್ತಮ ಸಂಪರ್ಕಕ್ಕೆ ಇದು ಪ್ರಮುಖ ಹೆಜ್ಜೆಯಾಗಿದ್ದು, ಭಾರತದ ಹೊಸ ಚೈತನ್ಯದ ಸಂಕೇತವಾಗಿದೆ ಎಂದು ಹೇಳಿದರು. ಈ ಯೋಜನೆ ರಾಜ್ಯದ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸಿ, ಸುತ್ತಮುತ್ತಲಿನ ಹಲವು ಪ್ರದೇಶಗಳಿಗೆ ಲಾಭ ತಂದಿಡಲಿದೆ ಎಂದರು.
ಪಶ್ಚಿಮ ಉತ್ತರ ಪ್ರದೇಶದ ರೈತರು ಮತ್ತು ಯುವಕರಿಗೆ ಇದು ದೊಡ್ಡ ಅವಕಾಶಗಳನ್ನು ಒದಗಿಸಲಿದೆ. ಅಭಿವೃದ್ಧಿ ಹೊಂದಿದ ಉತ್ತರ ಪ್ರದೇಶದ ಗುರುತಾಗಿ ಈ ವಿಮಾನ ನಿಲ್ದಾಣ ರೂಪುಗೊಳ್ಳಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಇದೇ ವೇಳೆ, ವಿಕಸಿತ ಉತ್ತರ ಪ್ರದೇಶ – ವಿಕಸಿತ ಭಾರತ ಅಭಿಯಾನದ ಹೊಸ ಅಧ್ಯಾಯ ಇಂದು ಆರಂಭವಾಗಿದೆ ಎಂದು ಹೇಳಿದರು. ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಈ ವಿಮಾನ ನಿಲ್ದಾಣದಿಂದ ಆಗ್ರಾ, ಮಥುರಾ, ಗಾಜಿಯಾಬಾದ್, ಮೀರತ್, ಇಟಾವಾ ಸೇರಿದಂತೆ ಹಲವು ನಗರಗಳಿಗೆ ಹೆಚ್ಚಿನ ಸಂಪರ್ಕ ಸಿಗಲಿದೆ.
ಮಧ್ಯಪ್ರಾಚ್ಯದ ಸಂಘರ್ಷದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯಿಂದ ಜಾಗತಿಕ ಮಟ್ಟದಲ್ಲಿ ಆಹಾರ, ಇಂಧನ ಮತ್ತು ರಸಗೊಬ್ಬರಗಳ ಕೊರತೆ ಉಂಟಾಗಿರುವ ಸಂದರ್ಭದಲ್ಲಿ ಭಾರತವು ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುತ್ತಿದೆ ಎಂದರು. ಸರ್ಕಾರವು ಸಾಮಾನ್ಯ ಜನರು ಹಾಗೂ ರೈತರ ಮೇಲೆ ಹೊರೆ ಬೀಳದಂತೆ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

