ನವದೆಹಲಿ: ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ನಂತರ, ಪ್ರಧಾನಿ ನರೇಂದ್ರ ಮೋದಿ ಭಯ ಪಟ್ಟಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗುರುವಾರ (ಅಕ್ಟೋಬರ್,16) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಪ್ರಧಾನಿ ಮೋದಿ ಟ್ರಂಪ್‌ಗೆ ಹೆದರುತ್ತಿದ್ದಾರೆ. ಭಾರತ ರಷ್ಯಾದ ತೈಲವನ್ನು ಖರೀದಿಸುವುದಿಲ್ಲ ಎಂದು ಟ್ರಂಪ್ ಘೋಷಿಸಲು ಅವಕಾಶ ನೀಡಿದ್ದಾರೆ. ಅಲ್ಲದೆ, ಪದೇಪದೆ ತಿರಸ್ಕಾರದ ಹೊರತಾಗಿಯೂ ಅಭಿನಂದನಾ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದಾರೆ. ಅಲ್ಲದೆ, ಹಣಕಾಸು ಸಚಿವರ ಅಮೆರಿಕ ಭೇಟಿಯನ್ನು ರದ್ದುಗೊಳಿಸಲಾಗಿದೆ.
ಈಜಿಪ್ಟ್ನ ಶರ್ಮ್ ಎಲ್-ಶೇಖ್ ನಡೆದ ಶಾಂತಿ ಸಭೆಗೂ ಮೋದಿ ಹೋಗಿಲ್ಲ. ಆಪರೇಷನ್ ಸಿಂಧೂರದ ಮೇಲಿನ ಟ್ರಂಪ್ ಹೇಳಿಕೆಯನ್ನು ವಿರೋಧಿಸುವುದಿಲ್ಲ ಎಂದು ಮೋದಿ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ಭಾರತದ ಪ್ರಧಾನಿಯಿಂದ ರಷ್ಯಾದ ತೈಲ ಖರೀದಿಯ ಬಗ್ಗೆ ಭರವಸೆ ದೊರೆತ ನಂತರ, ಭಾರತ ಶೀಘ್ರದಲ್ಲೇ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲಿದೆ ಎಂದು ಟ್ರಂಪ್ ಹೇಳಿದ್ದರು. ಅಲ್ಲದೆ, ಬುಧವಾರ ವಾಷಿಂಗ್ಟನ್‌ನ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿದರೆ ಉಕ್ರೇನ್ ಯುದ್ಧವನ್ನು ನಿಲ್ಲಿಸುವುದು ಸುಲಭವಾಗುತ್ತದೆ ಎಂದಿದ್ದಾರೆ.
ಅಲ್ಲದೆ, ಚೀನಾವು ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ. ಭಾರತ ತೈಲ ಖರೀದಿಸುತ್ತಿರುವುದು ನನಗೆ ಸಂತೋಷವಾಗಿರಲಿಲ್ಲ. ಮೋದಿ ಇಂದು ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ನನಗೆ ಭರವಸೆ ನೀಡಿದರು. ಇದು ಒಂದು ದೊಡ್ಡ ಹೆಜ್ಜೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.
ಭಾರತ ಮತ್ತು ಚೀನಾ ರಷ್ಯಾದ ತೈಲದ ಪ್ರಮುಖ ಖರೀದಿದಾರರಾಗಿದ್ದಾರೆ. ಇದಕ್ಕಾಗಿ ಪಶ್ಚಿಮ ದೇಶಗಳು ಭಾರತವನ್ನು ಟೀಕಿಸಿವೆ, ಆದರೆ ಭಾರತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ತಿಳಿಸಿದೆ.

