ನವದೆಹಲಿ, ಮಾರ್ಚ್ 27: ಈ ವರ್ಷದ ರಾಮನವಮಿ ಆಚರಣೆ ಅಯೋಧ್ಯೆಯಲ್ಲಿ ಭಕ್ತಿಭಾವದ ಜೊತೆಗೆ ಐತಿಹಾಸಿಕ ಕ್ಷಣಕ್ಕೂ ಸಾಕ್ಷಿಯಾಯಿತು. ದೇವಾಲಯ ಸಂಕೀರ್ಣದಾದ್ಯಂತ “ಜೈ ಶ್ರೀ ರಾಮ್” ಘೋಷಣೆಗಳು ಮೊಳಗುತ್ತಿದ್ದ ವೇಳೆ, ಬಾಲ ರಾಮನ ಹಣೆಗೆ ಸೂರ್ಯನ ಕಿರಣಗಳು ತಿಲಕ ರೂಪದಲ್ಲಿ ಬೀಳುವ ಅಪೂರ್ವ ದೃಶ್ಯ ಮೂಡಿಬಂತು. ಈ ದಿವ್ಯ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿ ಸ್ವತಃ ಕಣ್ತುಂಬಿಕೊಂಡರು.
ಈ ಅದ್ಭುತ ವ್ಯವಸ್ಥೆಯನ್ನು ರೂಪಿಸಲು ತಿಂಗಳುಗಳ ಕಾಲ ವೈಜ್ಞಾನಿಕ ಸಂಶೋಧನೆ ನಡೆಸಲಾಗಿತ್ತು. ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ (ರೂರ್ಕಿ) ಮತ್ತು ಬೆಂಗಳೂರಿನ ತಜ್ಞರು ಜಂಟಿಯಾಗಿ ಕೆಲಸ ಮಾಡಿ, ಸೂರ್ಯನ ಚಲನೆ, ಕೋನ ಮತ್ತು ಸಮಯದ ನಿಖರ ಲೆಕ್ಕಾಚಾರಗಳ ಆಧಾರದಲ್ಲಿ ಈ ಸೂರ್ಯ ತಿಲಕವನ್ನು ಸಾಧಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ, ಒಂದು ಸೆಕೆಂಡಿನಷ್ಟು ದೋಷವೂ ದೃಶ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇತ್ತು.
ಪ್ರಾಣ ಪ್ರತಿಷ್ಠೆಯ ನಂತರ ಇದು ಎರಡನೇ ಬಾರಿಗೆ ಬಾಲರಾಮನಿಗೆ ಸೂರ್ಯ ತಿಲಕ ಬಿದ್ದಿರುವುದು ವಿಶೇಷ. ಸೂರ್ಯ ತಿಲಕದ ಬಳಿಕ ರಾಮಲಲ್ಲಾಗೆ 56 ವಿಧದ ಭಕ್ಷ್ಯಗಳನ್ನು ಅರ್ಪಿಸಲಾಯಿತು. ಬೆಳಗ್ಗೆ 5.30ಕ್ಕೆ ಆರತಿ ನೆರವೇರಿಸಲಾಯಿತು ಮತ್ತು ದೇವರ ವಿಗ್ರಹಕ್ಕೆ ಹಳದಿ ಬಟ್ಟೆ ಹೊದಿಸಲಾಗಿತ್ತು.
ಭಕ್ತರ ಸೌಕರ್ಯಕ್ಕಾಗಿ ದರ್ಶನ ಸಮಯವನ್ನು ವಿಸ್ತರಿಸಲಾಗಿದ್ದು, ಬೆಳಗ್ಗೆ 5 ರಿಂದ ರಾತ್ರಿ 11ರವರೆಗೆ—ಒಟ್ಟು 18 ಗಂಟೆಗಳ ಕಾಲ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೂ ಮೊದಲು ದರ್ಶನ ಸಮಯ ಬೆಳಗ್ಗೆ 6.30ರಿಂದ ರಾತ್ರಿ 9.30ರವರೆಗೆ ಮಾತ್ರ ಇತ್ತು.
ರಾಮನವಮಿ ಅಂಗವಾಗಿ ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ರಾಮ ಜನ್ಮಭೂಮಿ ಸಂಕೀರ್ಣಕ್ಕೆ ಭೇಟಿ ನೀಡಿದ್ದು, ರಾಮ ಪಥ, ಭಕ್ತಿ ಪಥ ಹಾಗೂ ಜನ್ಮಭೂಮಿ ಪಥಗಳಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ. ಉದ್ದನೆಯ ಸರತಿ ಸಾಲುಗಳು ನಿರ್ಮಾಣವಾಗಿ, ಭಕ್ತರ ಭಕ್ತಿಭಾವದ ಮಹಾಸಾಗರವೇ ಅಯೋಧ್ಯೆಯಲ್ಲಿ ಹರಿದು ಬಂದಿದೆ.

