ಜೆರುಸಲೇಮ್, ಫೆಬ್ರವರಿ 26: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್‌ನ ಅತ್ಯುನ್ನತ ಪುರಸ್ಕಾರವಾದ ‘ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ’ ಪ್ರದಾನಿಸಿ ಗೌರವಿಸಲಾಗಿದೆ. ಭಾರತ–ಇಸ್ರೇಲ್ ನಡುವಿನ ದೀರ್ಘಕಾಲದ ಸ್ನೇಹ ಹಾಗೂ ಸಹಕಾರವನ್ನು ಬಲಪಡಿಸುವಲ್ಲಿ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ, ಇಸ್ರೇಲ್ ಸಂಸತ್ತಾದ ನೆಸ್ಸೆಟ್‌ನ ಸ್ಪೀಕರ್ ಅಮೀರ್ ಒಹಾನಾ ಅವರು ಈ ಗೌರವವನ್ನು ಪ್ರಧಾನ ಮಾಡಿದರು.
ಈ ಮೂಲಕ ಪ್ರಧಾನಿ ಮೋದಿ ಅವರು ಇಸ್ರೇಲ್ ಮತ್ತು ಪಾಲೆಸ್ತೀನ್ ಎರಡೂ ರಾಷ್ಟ್ರಗಳಿಂದಲೂ ಅತ್ಯುನ್ನತ ಗೌರವ ಪಡೆದ ಅಪರೂಪದ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ. 2018ರಲ್ಲಿ ಪಾಲೆಸ್ತೀನ್ ಸರ್ಕಾರವು ವಿದೇಶಿ ನಾಯಕರಿಗೆ ನೀಡುವ ಅತ್ಯುನ್ನತ ‘ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪಾಲೆಸ್ತೀನ್’ ಪ್ರಶಸ್ತಿಯನ್ನು ಮೋದಿಗೆ ನೀಡಿತ್ತು.
ಬುಧವಾರ ನೆಸ್ಸೆಟ್ ಅನ್ನು ಉದ್ದೇಶಿಸಿ ಭಾಷಣ ಮಾಡುವ ಮೊದಲು ಪ್ರಧಾನಿ ಮೋದಿಯನ್ನು ಸಂಸತ್ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಿದ ಮೊದಲ ಭಾರತೀಯ ನಾಯಕ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾದರು.
ಇಸ್ರೇಲ್ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರನ್ನು ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಿಗಿಯಾಗಿ ಅಪ್ಪಿಕೊಂಡು ಆತ್ಮೀಯವಾಗಿ ಸ್ವಾಗತಿಸಿದರು.
ಗೌರವ ಸ್ವೀಕರಿಸಿದ ನಂತರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಮೋದಿ, “ನೆಸ್ಸೆಟ್ ಪದಕ ಸ್ವೀಕರಿಸುವುದು ನನಗೆ ಅಪಾರ ಗೌರವ. ಇದನ್ನು ನಾನು ವಿನಮ್ರತೆ ಹಾಗೂ ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ಇದು ಭಾರತ ಮತ್ತು ಇಸ್ರೇಲ್ ನಡುವಿನ ಶಾಶ್ವತ ಸ್ನೇಹಕ್ಕೆ ಸಲ್ಲಿಸಿದ ಗೌರವ,” ಎಂದು ಹೇಳಿದರು.
ನೆಸ್ಸೆಟ್‌ನಲ್ಲಿ ಭಾಷಣ ಮಾಡಿದ ಮೋದಿ, ಭಯೋತ್ಪಾದನೆ ಎಲ್ಲೆಡೆ ಶಾಂತಿಗೆ ಬೆದರಿಕೆಯಾಗಿದೆ ಎಂದು ತಿಳಿಸಿದರು. ಗಾಜಾ ಶಾಂತಿ ಒಪ್ಪಂದಕ್ಕಾಗಿ ಭಾರತ ಶ್ರಮಿಸುತ್ತಿದೆ ಎಂದ ಅವರು, ಅಲ್ಲಿನ ಜನತೆಗೆ ನ್ಯಾಯ ಹಾಗೂ ಶಾಂತಿ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು.
2023ರಲ್ಲಿ ಹಮಾಸ್ ನಡೆಸಿದ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿದ ಮೋದಿ, “ನಿಮ್ಮ ನೋವನ್ನು ನಾವು ಅನುಭವಿಸುತ್ತೇವೆ. ನಾಗರಿಕರ ಹತ್ಯೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ಯಾವತ್ತೂ ನ್ಯಾಯವಿಲ್ಲ,” ಎಂದು ಹೇಳಿದರು.
ಭಾರತವು ದೀರ್ಘಕಾಲದಿಂದ ಭಯೋತ್ಪಾದನೆಯ ನೋವನ್ನು ಅನುಭವಿಸುತ್ತಿದೆ ಎಂದು ಹೇಳಿದ ಅವರು, 26/11 ಮುಂಬೈ ದಾಳಿಯನ್ನು ಉಲ್ಲೇಖಿಸಿದರು. ಇಸ್ರೇಲ್‌ನಂತೆ ಭಾರತವೂ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ನಿಲುವು ಹೊಂದಿದೆ ಎಂದ ಅವರು, ಜಾಗತಿಕ ಮಟ್ಟದಲ್ಲಿ ಸಂಘಟಿತ ಕ್ರಮಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ಮೋದಿ ಒಂಬತ್ತು ವರ್ಷಗಳಲ್ಲಿ ಇದು ಎರಡನೇ ಬಾರಿ ಇಸ್ರೇಲ್‌ಗೆ ಭೇಟಿ ನೀಡಿರುವುದು ಗಮನಾರ್ಹ. 2017ರ ಜುಲೈನಲ್ಲಿ ನಡೆದ ಮೊದಲ ಭೇಟಿಯಲ್ಲಿ ಭಾರತ–ಇಸ್ರೇಲ್ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಮೇಲ್ದರ್ಜೆಗೇರಿಸಲಾಗಿತ್ತು. ಈ ಎರಡನೇ ಭೇಟಿಯು ರಕ್ಷಣಾ, ತಂತ್ರಜ್ಞಾನ, ಕೃಷಿ ಮತ್ತು ಆರ್ಥಿಕ ಸಹಕಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಿದೆ.

