ಉಡುಪಿ, ನವೆಂಬರ್ 27: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28 ರಂದು ಉಡುಪಿಗೆ ಆಗಮಿಸಲಿದ್ದು, ಈ ಹಿನ್ನೆಲೆ ನಗರದೆಲ್ಲೆಡೆ ಭದ್ರತೆ ಹಾಗೂ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ನಗರವು ಕೇಸರಿಮಯ ವಾತಾವರಣವನ್ನು ತಳೆದುಕೊಂಡಿದ್ದು, ಪ್ರಧಾನಿ ಮೋದಿಯವರ ಸ್ವಾಗತಕ್ಕೆ ಸರ್ವತೋಮುಖ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರಧಾನಿ ಅವರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುವ ಮೊದಲು ಬನ್ನಂಜೆಯಿಂದ ಕಲ್ಸಂಕದವರೆಗೆ ಸುಮಾರು 20 ನಿಮಿಷಗಳ ಕಾಲ ರೋಡ್ ಶೋ ನಡೆಸಲಿದ್ದಾರೆ. ಸಾರ್ವಜನಿಕರು ರಸ್ತೆಯ ಎರಡೂ ಬದಿಯಲ್ಲಿ ನಿಂತು ವೀಕ್ಷಿಸಲು ವಿಶೇಷ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ರೋಡ್ ಶೋ ಮಾರ್ಗದೆಲ್ಲೆಡೆ ಕೇಸರಿ ಪತಾಕೆಗಳು ಹಾಗೂ ಬಂಟಿಂಗ್ಸ್‌ಗಳನ್ನು ಹಾಕಲಾಗಿದೆ.
ಮೋದಿ ಭೇಟಿಗೆ ಹೇಗಿದೆ ಭದ್ರತೆ?
ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 3,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎರಡು ಹಂತದ ಭದ್ರತಾ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದ್ದು, ಒಂದು ಪದರವು ಪೊಲೀಸ್ ಭದ್ರತೆಗೆ ಮತ್ತು ಇನ್ನೊಂದು ಸಾರ್ವಜನಿಕರಿಗೆ ಮೀಸಲಾಗಿದೆ. ಪ್ರಧಾನಿ ಮೋದಿ ಪ್ರಧಾನಿಯಾದ ನಂತರ ಶ್ರೀ ಕೃಷ್ಣ ಮಠಕ್ಕೆ ನೀಡುತ್ತಿರುವ ಇದು ಮೊದಲ ಭೇಟಿ ಎಂಬ ಕಾರಣಕ್ಕೆ ನಗರ ಆಡಳಿತ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕೊನೆಯ ಹಂತದ ಸಿದ್ಧತೆಗಳಲ್ಲಿ ತೊಡಗಿಕೊಂಡಿವೆ.
ದಕ್ಷಿಣ ಗೋವಾದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಅನಾವರಣ
ಗೋವಾ, ನವೆಂಬರ್ 27: ದಕ್ಷಿಣ ಗೋವಾ ಜಿಲ್ಲೆಯ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ 77 ಅಡಿ ಎತ್ತರದ ಕಂಚಿನ ಶ್ರೀರಾಮನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ ಎಂದು ಮಠದ ಪ್ರತಿನಿಧಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಮಧ್ಯಾಹ್ನ 3.45ಕ್ಕೆ ಸ್ಥಳಕ್ಕೆ ಆಗಮಿಸಲಿದ್ದು, ಮಠದ ಆವರಣದಲ್ಲೇ ವಿಶೇಷ ಹೆಲಿಪ್ಯಾಡ್ ನಿರ್ಮಿಸಲಾಗಿದೆ ಎಂದು ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಡೆಂಪೊ ತಿಳಿಸಿದ್ದಾರೆ.
ಈ 77 ಅಡಿ ಎತ್ತರದ ಪ್ರತಿಮೆಯನ್ನು ‘ಏಕತಾ ಪ್ರತಿಮೆ’ ವಿನ್ಯಾಸಗೊಳಿಸಿದ ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ ರವರು ನಿರ್ಮಿಸಿದ್ದಾರೆ ಎಂದು ಗೋವಾ ಲೋಕೋಪಯೋಗಿ ಸಚಿವ ದಿಗಂಬರ್ ಕಾಮತ್ ತಿಳಿಸಿದ್ದಾರೆ. ಇದು ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆಯಾಗಲಿದೆ ಎಂದು ಅವರು ಹೇಳಿದರು.
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೊದಲು ಪ್ರಧಾನಿ ಮೋದಿ ಮಠದ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಗೋವಾ ರಾಜ್ಯಪಾಲ ಅಶೋಕ್ ಗಜಪತಿ ರಾಜು, ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ಸಚಿವ ಶ್ರೀಪಾದ ನಾಯಕ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

