ಟೋಕಿಯೋ: ಜಪಾನ್ ಭೇಟಿಯ ಎರಡನೇ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸೆಂಡೈಗೆ ಬುಲೆಟ್ ರೈಲು ಪ್ರಯಾಣ ಮಾಡಿದರು, ಅವರ ಜೊತೆ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಮತ್ತು ಇತರ ಅಧಿಕಾರಿಗಳೂ ಇದ್ದರು.ಭಾರತವು ಅಹಮದಾಬಾದ್ ಮತ್ತು ಮುಂಬೈ ನಡುವೆ ಬುಲೆಟ್ ರೈಲು ಜಾಲವನ್ನು ನಿರ್ಮಿಸುತ್ತಿದ್ದು, ಪ್ರಧಾನಿ ಮೋದಿ ಆಲ್ಫಾ-ಎಕ್ಸ್ ರೈಲಿನ ಕುರಿತು ವಿವರವಾದ ಮಾಹಿತಿಯನ್ನು ಪಡೆದರು.
ಪ್ರಯಾಣಕ್ಕೂ ಮುನ್ನ, ಪ್ರಧಾನಿ ಮೋದಿ ಅವರು ಜಪಾನ್‌ನಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ರೈಲು ಚಾಲಕರನ್ನು ಭೇಟಿಯಾದರು. ಇದಕ್ಕೂ ಮುನ್ನ ಭಾರತೀಯ ಮಾರುಕಟ್ಟೆಯಲ್ಲಿ ವಿದೇಶಿ ಕಂಪನಿಗಳ ಹೆಚ್ಚುತ್ತಿರುವ ಹೂಡಿಕೆಗಳ ಬಗ್ಗೆ ಮಾತನಾಡಿದ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ಬಂಡವಾಳ ಬೆಳೆಯುವುದು ಮಾತ್ರವಲ್ಲ, ಬದಲಾಗಿ ಅದು ದುಪ್ಪಟ್ಟಾಗುತ್ತದೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಜೆಟ್ರೋ (ಜಪಾನ್ ಬಾಹ್ಯ ವ್ಯಾಪಾರ ಸಂಸ್ಥೆ) ಹೇಳುವಂತೆ ಶೇ. 80 ರಷ್ಟು ಕಂಪನಿಗಳು ಭಾರತದಲ್ಲಿ ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಯಸುತ್ತವೆ. ಶೇ. 75 ರಷ್ಟು ಕಂಪನಿಗಳು ಲಾಭ ಗಳಿಸುತ್ತಿವೆ. ಭಾರತದಲ್ಲಿ, ಬಂಡವಾಳವು ಕೇವಲ ಬೆಳೆಯುವುದಿಲ್ಲ, ಅದು ದುಪ್ಪಟ್ಟಾಗುತ್ತದೆ ಎಂದರು. ಭಾರತದ ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯನ್ನು ಬಿಂಬಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದರು.
ಮೆಟ್ರೋ ರೈಲಿನಿಂದ ಉತ್ಪಾದನೆಯವರೆಗೆ, ಸೆಮಿಕಂಡಕ್ಟರ್‌ಗಳಿಂದ ಸ್ಟಾರ್ಟ್‌ಅಪ್‌ಗಳವರೆಗೆ ಜಪಾನ್ ಸಾ ಭಾರತದ ಪ್ರಮುಖ ಪಾಲುದಾರನಾಗಿದೆ ಎಂದು ಅವರು ಹೇಳಿದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಿಂದಲೂ ಅನೇಕ ಜಪಾನಿನ ವ್ಯಾಪಾರ ನಾಯಕರೊಂದಿಗಿನ ತಮ್ಮ ವೈಯಕ್ತಿಕ ಸಂಬಂಧಗಳನ್ನು ಮೋದಿ ನೆನಪಿಸಿದರು.

