ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಪೈಶಾಚಿತ ಕೃತ್ಯವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಶ್ಮೀರದ ನರಮೇಧವನ್ನು ಬಿಜೆಪಿಯ ಹಿಂದುತ್ವದ ಜೊತೆಗೆ ಲಿಂಕ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಭಾರತದಲ್ಲಿ ಅಲ್ಪಸಂಖ್ಯಾತರು ಅನಾನುಕೂಲ ಮತ್ತು ತೊಂದರೆ ಅನುಭವಿಸುತ್ತಿದ್ದಾರೆ. ಬಿಜೆಪಿಯ ಹಿಂದುತ್ವದ ಪ್ರಚೋದನೆಯೇ ಇದಕ್ಕೆ ಕಾರಣ ಎಂದು ದೂಷಿಸಿದರು. ಮುಂದುವರಿದು.. ನಮ್ಮ ದೇಶದಲ್ಲಿ ಇಂದಿನ ಬಿಜೆಪಿ ಸರ್ಕಾರ ಪದೇ ಪದೇ ಹಿಂದುತ್ವದ ಬಗ್ಗೆ ಮಾತನಾಡುವುದನ್ನು ನಾವು ನೋಡುತ್ತಿದ್ದೇವೆ.
ಮತ್ತೊಂದೆಡೆ ಅಲ್ಪಸಂಖ್ಯಾತರು ತೊಂದರೆ ಅನುಭವಿಸುತ್ತಿದ್ದಾರೆ. ಈಗ ದುಷ್ಕೃತ್ಯವನ್ನು ಏಕೆ ಮಾಡಿದ್ದಾರೆ ಅಂತ ವಿಶ್ಲೇಷಣೆ ಮಾಡಿದ್ರೆ, ನಮ್ಮ ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವಿಭಜನೆ (ಒಡಕು) ಉಂಟಾಗಿದೆ ಎಂದು ಹೇಳಿದ್ದಾರೆ.
ಗುರುತನ್ನು ಪರಿಶೀಲಿಸಿ, ಹಿಂದೂಗಳನ್ನು ಮಾತ್ರವೇ ಕೊಲ್ಲುವ ಭಯೋತ್ಪಾದಕರ ಕೃತ್ಯವು ಪ್ರಧಾನಿ ಮೋದಿ ಅವರಿಗೆ ನೀಡಿದ ಸಂದೇಶವಾಗಿದೆ. ಹಿಂದೂಗಳು ಎಲ್ಲಾ ಮುಸ್ಲಿಮರಿಗೆ ತೊಂದರೆ ಕೊಡುತ್ತಿದ್ದಾರೆ ಅಂತ ಈ ರೀತಿಯ ಉಗ್ರ ಸಂಘಟನೆಗಳಿಗೆ ಅನ್ನಿಸಿದೆ. ಗುರುತನ್ನು ಪತ್ತೆ ಹಚ್ಚಿ ನಂತರ ಯಾರನ್ನೊ ಕೊಲ್ಲುವುದು ಪ್ರಧಾನಿಗೆ ನೀಡಿದ ಸಂದೇಶವಾಗಿದೆ.
ಕಾರಣ, ಮುಸ್ಲಿಮರು ದುರ್ಬಲರಾಗಿದ್ದಾರೆ ಎನ್ನುವ ಭಾವನೆ ಉಗ್ರ ಸಂಘಟನೆಗಳಲ್ಲಿ ಇದೆ. ಅಲ್ಪಸಂಖ್ಯಾತರಲ್ಲಿ ದುರ್ಬಲರೆಂಬ ಭಾವನೆಯಿದೆ. ನಮ್ಮ ದೇಶದಲ್ಲಿ ನಾವು ಸುರಕ್ಷಿತರು ಮತ್ತು ಜಾತ್ಯತೀತರು ಎಂಬ ಭಾವನೆ ಸರ್ಕಾರದ ಮಟ್ಟದಿಂದ ಬರಬೇಕು. ಆಗ ಈ ರೀತಿಯ ಕೃತ್ಯಗಳು ನಡೆಯುವುದನ್ನು ನಾವು ನೋಡುವುದಕ್ಕೆ ಆಗಲ್ಲ ಎಂದು ಹೇಳಿದ್ದಾರೆ.