ಬೆಂಗಳೂರು, ಡಿಸೆಂಬರ್ 25: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೇಸ್ಕಾಂ) ವ್ಯಾಪ್ತಿಯಲ್ಲಿ ಡಿಸೆಂಬರ್ 26, 2025ರಂದು ವಿದ್ಯುತ್ ವ್ಯತ್ಯಯ (ಪವರ್ ಕಟ್) ಉಂಟಾಗಲಿದೆ. 66/11 ಕೆವಿ ಕಗ್ಗೇನಹಳ್ಳಿ ಸಬ್‌ಸ್ಟೇಷನ್‌ನಲ್ಲಿ ಕೇಬಲ್ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿದ್ಯುತ್ ವ್ಯತ್ಯಯ ಸಂಭವಿಸಲಿದೆ ಎಂದು ಬೇಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕವೂ ಮಾಹಿತಿ ಹಂಚಿಕೊಳ್ಳಲಾಗಿದೆ.
ಬೇಸ್ಕಾಂ ಪ್ರಕಟಣೆಯ ಪ್ರಕಾರ, ಡಿಸೆಂಬರ್ 26ರಂದು ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಕಗ್ಗೇನಹಳ್ಳಿ ಸಬ್‌ಸ್ಟೇಷನ್‌ನ 9-7 ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಈ ಅವಧಿಯಲ್ಲಿ ವಿದ್ಯುತ್ ಪೂರೈಕೆ ಇರದು.
ವಿದ್ಯುತ್ ವ್ಯತ್ಯಯಕ್ಕೆ ಒಳಪಡುವ ಪ್ರದೇಶಗಳಲ್ಲಿ ನಾರ್ಥ್ ಗೇಟ್–1, 2, 3, ಎಂಬಾಸಿ ಪ್ರದೇಶ, ಫೀಲಿಪ್ಸ್ ಕಂಪನಿ, ದ್ವಾರಕನಗರ, ಬಾಬಾನಗರ, ಕಗ್ಗೇನಹಳ್ಳಿ ಸುತ್ತಮುತ್ತಲ ಪ್ರದೇಶಗಳು, ಬಾಗಲೂರು ಕ್ರಾಸ್, ಮಟ್ಟು ಬಾಗಲೂರು ಮುಖ್ಯ ರಸ್ತೆ, ಮಣಿಪಾಲ ಕಾಲೇಜು, BSF, PDMS, ಬಾಗಲೂರು ಕ್ರಾಸ್ ವಿನಾಯಕನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳು ಸೇರಿವೆ.
ನಿರ್ವಹಣಾ ಕಾರ್ಯ ಪೂರ್ಣಗೊಂಡ ನಂತರ ವಿದ್ಯುತ್ ಸರಬರಾಜು ಪುನಃ ಆರಂಭಿಸಲಾಗುವುದು ಎಂದು ಬೇಸ್ಕಾಂ ಸ್ಪಷ್ಟಪಡಿಸಿದೆ. ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಿ ಸಹಕರಿಸುವಂತೆ ಬೇಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.

