ನಂಜನಗೂಡು, ಫೆ.16: ಶ್ರೀ ನಂಜುಂಡೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಇನ್ನು ಮುಂದೆ ಬೆಳಿಗ್ಗೆ ತಿಂಡಿ ಹಾಗೂ ರಾತ್ರಿ ವೇಳೆಯೂ ಪ್ರಸಾದ ಸಿಗಲಿದೆ. ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ಅವರು ಈ ಹೊಸ ವ್ಯವಸ್ಥೆಗೆ ಅಧಿಕೃತ ಚಾಲನೆ ನೀಡಿದರು.
ಇಲ್ಲಿನ ದಾಸೋಹ ಭವನದಲ್ಲಿ ಇದುವರೆಗೆ ಮಧ್ಯಾಹ್ನ ಒಂದೇ ಸಮಯದಲ್ಲಿ ಪ್ರಸಾದ ವಿತರಣೆ ನಡೆಯುತ್ತಿತ್ತು. ಬೆಳಿಗ್ಗೆ ಹಾಗೂ ರಾತ್ರಿ ವೇಳೆ ಪ್ರಸಾದ ವ್ಯವಸ್ಥೆ ಇಲ್ಲದ ಕಾರಣ ದೂರದೂರಿನಿಂದ ಆಗಮಿಸುವ ಭಕ್ತರಿಗೆ ತೊಂದರೆ ಉಂಟಾಗುತ್ತಿತ್ತು. ಭಕ್ತರ ಅನುಕೂಲವನ್ನು ಮನಗಂಡು ಇದೀಗ ಬೆಳಿಗ್ಗೆ ಮತ್ತು ರಾತ್ರಿ ವೇಳೆಯೂ ಪ್ರಸಾದ ವ್ಯವಸ್ಥೆ ಆರಂಭಿಸಲಾಗಿದೆ.
ಇಂದು ಬೆಳಿಗ್ಗೆ ಶಾಸಕ ದರ್ಶನ್ ಧ್ರುವನಾರಾಯಣ ಅವರು ಸ್ವತಃ ಭಕ್ತರಿಗೆ ಪ್ರಸಾದ ಬಡಿಸುವುದರ ಮೂಲಕ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಇಂದಿನಿಂದ ಬೆಳಿಗ್ಗೆ ಮತ್ತು ರಾತ್ರಿ ವೇಳೆಯೂ ಪ್ರಸಾದ ನೀಡಲಾಗುತ್ತದೆ. ಕ್ಷೇತ್ರದ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಅಗತ್ಯ. ಭಕ್ತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ತಿಳಿಸಿದರು.
ದೇವಾಲಯಕ್ಕೆ ಮತ್ತೆ ಆನೆ ತರಬೇಕೆಂಬ ಭಕ್ತರ ಮನವಿಗೆ ಸ್ಪಂದಿಸಿದ ಶಾಸಕ, ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ, ಸಂಸದ ಸುನಿಲ್ ಬೋಸ್ ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್ ಸೇರಿದಂತೆ ಹಲವು ಗಣ್ಯರು ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

