ರಾಯಬಾಗ: ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಸಚಿವ ಸತೀಶ್ ಜಾರಕಿಹೊಳಿ ಆಯ್ಕೆಯಾಗಲಿ ಎಂದು ದೇವರಲ್ಲಿ ಹರಿಕೆ ಕೇಳಿದ ಘಟನೆ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದಲ್ಲಿ ಜರುಗಿದ ಶ್ರೀ ಅರಣ್ಯ ಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ನಡೆದಿದೆ.
ಜಾತ್ರೆಯ ಅಂಗವಾಗಿ ನಡೆದ ದೇವರ ಪಲ್ಲಕ್ಕಿ ಮೆರವಣಿಗೆ ವೇಳೆ ಭಕ್ತನೊಬ್ಬ ಬಾಳೆಹಣ್ಣಿನ ಮೇಲೆ “ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ” ಎಂದು ಬರೆದು ದೇವರಿಗೆ ಅರ್ಪಣೆ ಮಾಡಿದ್ದಾನೆ. ಈ ಘಟನೆ ಸ್ಥಳೀಯರ ಗಮನ ಸೆಳೆದಿದ್ದು, ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.
ಖೇಮಲಾಪೂರ ಗ್ರಾಮದ ಸಿದ್ದು ಸನದಿ ಎಂಬ ಭಕ್ತನೇ ಈ ಹರಿಕೆಯನ್ನು ಮಾಡಿದ್ದಾನೆ ಎನ್ನಲಾಗಿದೆ. ಈ ಹಿಂದೆ ಕುಡಚಿ ಕ್ಷೇತ್ರದಲ್ಲಿ ಮಹೇಂದ್ರ ತಮ್ಮಣ್ಣವರ ಶಾಸಕರಾಗಲಿ ಎಂದು ಸಹ ಹರಿಕೆ ಕೇಳಿದ್ದುದಾಗಿ ತಿಳಿದು ಬಂದಿದೆ.
ಜಾತ್ರಾ ಮೆರವಣಿಗೆಯ ವೇಳೆ ಬಾಳೆಹಣ್ಣು ಎಸೆದು ದೇವರಲ್ಲಿ ಬೇಡಿಕೆ ಇಟ್ಟ ಘಟನೆ ಕೆಲವರಿಗೆ ಆಶ್ಚರ್ಯ ತಂದರೆ, ಕೆಲವರು ಭಕ್ತಿಯ ಅಭಿವ್ಯಕ್ತಿಯೆಂದು ಹೇಳಿಕೊಂಡಿದ್ದಾರೆ.
ವರದಿ: ಕಲ್ಲಪ್ಪಾ ಮಾಳಾಜ, ಸಂಪೂರ್ಣ ನ್ಯೂಸ್, ಚಿಕ್ಕೋಡಿ

