ಬೆಂಗಳೂರು :ರಾಜ್ಯದಲ್ಲಿ ಸರ್ಕಾರಿ ಬಸ್ ದರ ಏರಿಕೆಯ ಬೆನ್ನಲ್ಲೇ ಆಟೋ ರಿಕ್ಷಾ ಹಾಗೂ ಖಾಸಗಿ ಬಸ್ ಪ್ರಯಾಣದ ದರ ಕೂಡ ಏರಿಕೆ ಮಾಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸಂಘಟನೆಗಳು ಒತ್ತಡ ಹೇರಲಾಗುತ್ತಿದೆ ಎಂದು ವರದಿಯಾಗಿದೆ.
ಈಗಾಗಲೇ ಸರ್ಕಾರಿ ಸಾರಿಗೆ ಇಲಾಖೆ ನೂತನ ಪಟ್ಟಿಯನ್ನು ಬಿಡುಗಟೆ ಮಾಡಿದೆ. 50 ರಿಂದ 100 ರೂಪಾಯಿಯಷ್ಟು ಟಿಕೆಟ್ ದರ ಹೆಚ್ಚಳವಾಗಿದೆ. ಕೆಎಸ್ಆರ್ ಟಿಸಿ ಪಾಸ್ 150 ರಿಂದ 200 ರೂಪಾಯಿವರೆಗೆ ಹೆಚ್ವಳವಾಗಿದ್ದರೆ, ಬಿಎಂಟಿಸಿ ಪಾಸ್ ದರ 100 ರಿಂದ 150 ರೂಪಾಯಿವರೆಗೆ ಏರಿಕೆ ಆಗಿದೆ.
ಇದರ ಬೆನ್ನಲ್ಲೇ ಖಾಸಗಿ ಬಸ್ ಮಾಲೀಕರು ಹಾಗೂ ಆಟೋ ಚಾಲಕರ ಸಂಘಟನೆಗಳು ಕೂಡ ಬೆಲೆ ಏರಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ವರದಿಯ ಪ್ರಕಾರ, ಒಂದು ಕಿಲೋಮೀಟರ್ಗೆ 5 ರೂಪಾಯಿ, ಎರಡು ಕಿಲೋಮೀಟರ್ಗೆ 10 ರೂಪಾಯಿ ಏರಿಕೆ ಮಾಡುವಂತೆ ಮಾಡಿವೆ. ಸದ್ಯ ಆಟೋರಿಕ್ಷಾ ಪ್ರಯಾಣ ದರ ಕಿಲೋಮೀಟರ್ಗೆ 30 ರೂಪಾಯಿ ಇದೆ. ಇದೀಗ 40 ರೂಪಾಯಿಗೆ ಏರಿಕೆ ಮಾಡುವಂತೆ ಸಂಘಟನೆಗಳು ಒತ್ತಾಯಿಸಿದೆ.
ಇನ್ನು ಖಾಸಗಿ ಬಸ್ ಟಿಕೆಟ್ ದರ ಹೆಚ್ಚಿಸುವಂತೆ ಮಾಲೀಕರು ಕೂಡ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ ಗಳಿಗೆ ಸರಿ ಸಮವಾಗಿ ಖಾಸಗಿ ಬಸ್ ಗಳೂ ಓಡಾಟ ನಡೆಸುತ್ತಿದ್ದು, ಸಾರ್ವಜನಿಕರಿಗೆ ಬಸ್ ಸೇವೆ ಒದಗಿಸುತ್ತಿವೆ.
ಕೋವಿಡ್ ನಂತರ ಖಾಸಗಿ ಬಸ್ ಉದ್ಯಮ ತೀವ್ರ ಸಂಕಷ್ಟಕ್ಕೆ ತುತ್ತಾಗಿದೆ. ರಾಜ್ಯ ಸರ್ಕಾರ ಶಕ್ತಿ ಯೋಜನೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದ ನಷ್ಟಕ್ಕೀಡಾದ ಹಲವು ಖಾಸಗಿ ಬಸ್ ಕಂಪೆನಿಗಳು ಬಾಗಿಲು ಮುಚ್ಚಿವೆ. ಜೊತೆಗೆ ಪೆಟ್ರೋಲ್, ಡಿಸೇಲ್, ಬೆನ್ನಲ್ಲೇ ವಾಹನದ ಬಾಗಗಳ ಬೆಲೆ ಕೂಡ ಹೆಚ್ಚಾಗಿವೆ.
ಈ ಎಲ್ಲದರಿಂದ ಖಾಸಗಿ ಬಸ್ ಮಾಲೀಕರಿಗೆ ಸಾಕಷ್ಟು ನಷ್ಟವಾಗಿದೆ. ಹೀಗಾಗಿ ನಷ್ಟವನ್ನು ಸರಿದೂಗಿಸಲು ದರ ಕೂಡ ಏರಿಕೆ ಹೆಚ್ಚಳ ಮಾಡಲು ಅವಕಾಶ ಮಾಡಿಕೊಡುವಂತೆ ಖಾಸಗಿ ಬಸ್ ಮಾಲೀಕರು ಮನವಿ ಮಾಡಿದ್ದಾರೆ.

