ನವದೆಹಲಿ : ಇಂದುತಮ್ಮ 75 ನೇ ವರ್ಷದ ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಬಿಜೆಪಿ ಸೇರಿದಂತೆ, ಅನೇಕ ವಿರೋಧ ಪಕ್ಷದ ನಾಯಕರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಮತ್ತು ಉತ್ತಮ ಆರೋಗ್ಯವನ್ನು ಲಭ್ಯವಾಗಲಿ ಎಂದು ಹಾರೈಸುವುದಾಗಿ ಬರೆದುಕೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಪೋಸ್ಟ್ ಹಂಚಿಕೊಂಡಿದ್ದು, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಲಭ್ಯವಾಗಲಿ ಎಂದು ಬರೆದಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಶರದ್ ಪವಾರ್, ನಿಮ್ಮ ಜನ್ಮದಿನದಕ್ಕೆ ನನ್ನ ಆತ್ಮೀಯ ಶುಭಾಶಯಗಳು, ನಿಮ್ಮ ಸಮರ್ಥ ಮಾರ್ಗದರ್ಶನದಲ್ಲಿ ನಮ್ಮ ರಾಷ್ಟ್ರದ ನಿರಂತರ ಪ್ರಗತಿಯನ್ನು ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ವಡ್ನಗರದಲ್ಲಿ ಸೆಪ್ಟೆಂಬರ್ 17, 1950 ರಂದು ಜನಿಸಿದರು. ಪ್ರಧಾನಿ ಮೋದಿ ಇಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದು, ಮಹಿಳೆಯರ ಆರೋಗ್ಯ ಸುಧಾರಣೆ ಮತ್ತು ಕುಟುಂಬದ ಯೋಗಕ್ಷೇಮವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಎರಡು ಮಹತ್ವದ ಯೋಜನೆಗಳನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.
950ರ ಸೆಪ್ಟೆಂಬರ್ 17ರಂದು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಜನಿಸಿದ ಮೋದಿ, 2001ರಿಂದ 2014ರವರೆಗೆ ಮೂರು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 2014ರಿಂದ ಅವರು ದೇಶದ ಪ್ರಧಾನಮಂತ್ರಿಯಾಗಿ ಭಾರತವನ್ನು ಮುನ್ನಡೆಸುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿ ಕೂಡ ಭಾರತೀಯ ಜನತಾ ಪಕ್ಷವು ಮೋದಿ ಅವರ ಜನ್ಮದಿನವನ್ನು ದೇಶಾದ್ಯಂತ ‘ಸೇವಾ ಪಖ್ವಾಡ’ ಎಂದು ಕರೆಯುವ ಎರಡು ವಾರಗಳ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಅಕ್ಟೋಬರ್ 2 ರವರೆಗೆ ದೇಶಾದ್ಯಂತ ಸ್ಥಳೀಯ ಉತ್ಪನ್ನಗಳ ಬಳಕೆಯನ್ನು ಜನರಲ್ಲಿ ಉತ್ತೇಜಿಸಲು ಆರೋಗ್ಯ ಶಿಬಿರಗಳಿಂದ ಹಿಡಿದು ಸ್ವಚ್ಛತಾ ಅಭಿಯಾನ, ಬುದ್ಧಿಜೀವಿಗಳ ಸಭೆ ಮತ್ತು ಮೇಳಗಳವರೆಗೆ ಹಲವಾರು ಪ್ರಚಾರ, ಕಲ್ಯಾಣ, ಅಭಿವೃದ್ಧಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿವೆ.
ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಪೋಷಣೆಯ ಮೇಲೆ ಕೇಂದ್ರೀಕರಿಸುವ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಲು ಮೋದಿಯವರೇ ಸ್ವತಃ ಮಧ್ಯಪ್ರದೇಶದ ಧಾರ್‌ಗೆ ಪ್ರಯಾಣಿಸುತ್ತಿದ್ದಾರೆ. ಬುಡಕಟ್ಟು ಜನಸಂಖ್ಯೆಯ ಮೇಲೆ ಕೇಂದ್ರೀಕರಿಸಿದ ಕಾರ್ಯಕ್ರಮ ಸೇರಿದಂತೆ ಹಲವಾರು ಇತರ ಅಭಿವೃದ್ಧಿ ಕಾರ್ಯಕ್ರಮಳಿಗೆ ಅವರು ಚಾಲನೆ ನೀಡಲಿದ್ದಾರೆ.
ಹುಟ್ಟುಹಬ್ಬದ ಅಂಗವಾಗಿ ದೆಹಲಿ ಸರ್ಕಾರವು 75 ಡ್ರೋನ್‌ಗಳ ಪ್ರದರ್ಶನವನ್ನು ಆಯೋಜಿಸಿದೆ. ಸೆಪ್ಟೆಂಬರ್ 17ರಂದು ದೆಹಲಿಯ ತ್ಯಾಗರಾಜ ಕ್ರೀಡಾಂಗಣದಲ್ಲಿ ಈ ಡ್ರೋನ್ ಶೋ ನಡೆಯಲಿದೆ.
ಬಿಜೆಪಿ ಯುವಮೋರ್ಚಾ 75 ನಗರಗಳಲ್ಲಿ ‘ನಮೋ ಯುವ ರನ್’ ಹೆಸರಿನಲ್ಲಿ ಮ್ಯಾರಥಾನ್ ಆಯೋಜಿಸಿದ್ದು, ಪ್ರತಿ ಕಡೆ 10000ಕ್ಕೂ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ. ಗುಜರಾತ್ ಸರ್ಕಾರ ಯೋಗ ಅಭಿಯಾನ, ದೆಹಲಿಯಲ್ಲಿ ಸಿಎಂ ರೇಖಾ ಗುಪ್ತಾ ಸರ್ಕಾರ ವಿವಿಧ ಆರೋಗ್ಯ ಯೋಜನೆಗಳನ್ನು ಜನರಿಗೆ ಮುಕ್ತ ಮಾಡಲಿದ್ದಾರೆ. ಬಂಗಾಳದಲ್ಲಿ ವಾರಪೂರ್ತಿ ಮೋದಿ ಅವರ ಜೀವನದ ಕುರಿತು ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಗೆ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಟ್ರಂಪ್;
ತಮ್ಮ 75 ನೇ ಹುಟ್ಟುಹಬ್ಬಕ್ಕೆ ಕರೆ ಮಾಡಿ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಧನ್ಯವಾದ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ-ಅಮೆರಿಕ ಸಂಬಂಧಗಳನ್ನು ಉತ್ತಮಗೊಳಿಸುವ ಬದ್ಧತೆ ಮತ್ತು ಉಕ್ರೇನ್ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕಾದ ನಿಲುವಿಗೆ ಬೆಂಬಲ ನೀಡುತ್ತೇನೆ ಎಂದರು.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ನಿಮ್ಮಂತೆಯೇ, ನಾನು ಕೂಡ ಭಾರತ-ಯುಎಸ್ ಸಮಗ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಬದ್ಧನಾಗಿದ್ದು. ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರದತ್ತ ನಿಮ್ಮ ಉಪಕ್ರಮಗಳನ್ನು ಭಾರತ ಬೆಂಬಲಿಸುತ್ತದೆ ಎಂದು ಭರವಸೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ರಂಪ್, ಪ್ರಧಾನಿ ಮೋದಿಯವರೊಂದಿಗೆ ಅದ್ಬುತ ಮಾತುಕತೆ ನಡೆದಿದ್ದು, ನಡೆಯುತ್ತಿರುವ ಯುದ್ಧವನ್ನು ಪರಿಹರಿಸುವಲ್ಲಿ ಅಮೆರಿಕಾಗೆ ಬೆಂಬಲ ನೀಡುವುದಾಗಿ ತಿಳಿಸಿರುವುದಕ್ಕೆ ಧನ್ಯವಾಧಗಳನ್ನು ಅರ್ಪಿಸಿದ್ದಾರೆ.

